ದಾವಣಗೆರೆ, ಡಿ. 8 – ವಿಶ್ವ ಮಧ್ವ ಮಹಾ ಪರಿಷತ್ತಿನ ದಾವಣಗೆರೆ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನಗರದ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಆಯೋಜಿಸಿದ್ದ ಮಹಾಭಾರತ ಪ್ರವಚನದ ಮಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಭಾರತ ಎಂದರೆ ಕೇವಲ ಅಣ್ಣ, ತಮ್ಮಂದಿರ ಜಗಳ, ಜೂಜಾಟ ಎಂದು ಭಾವಿಸುವುದು ಸರಿಯಲ್ಲ. ನಮ್ಮ ಜೀವನವನ್ನು ಹೇಗೆ ಸಾರ್ಥಕ ಗೊಳಿಸಿಕೊಳ್ಳಬೇಕು ಎಂಬುದಕ್ಕೆ ಈ ಗ್ರಂಥದಲ್ಲಿ ಹಲವು ಕಥೆಗಳಿವೆ ಎಂದು ತಿಳಿಸಿದರು.
ಮಹಾಭಾರತದಲ್ಲಿ ಬರುವ ವಿಚಾರ ಗಳನ್ನು ನಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳ ಬೇಕು. ನಮ್ಮಲ್ಲಿ ಕೆಟ್ಟ ಪ್ರವೃತ್ತಿ ಬಂದರೆ ಕೌರವರು ಗೆದ್ದಂತೆ. ಒಳ್ಳೆಯ ವಿಚಾರಗಳು ಮನದಲ್ಲಿ ಮೂಡಿದರೆ ಪಾಂಡವರು ಜಯಿಸಿದಂತೆ ಎಂದು ಹೇಳಿದರು.
ಈ ಮೇರು ಕೃತಿಯು ವಿಶಿಷ್ಟವಾಗಿದ್ದು 1 ಲಕ್ಷ ಶ್ಲೋಕಗಳಿವೆ. ಮಹತ್ವದ ದೃಷ್ಟಿಯಿಂದ ಇದು ಭಾರವಾದ ಗ್ರಂಥವಾಗಿದೆ. ಇದರಲ್ಲಿನ ವಿಷಯಗಳನ್ನು ಕೇಳಿದರೆ ಪಾಪ ಪರಿಹಾರವಾಗುತ್ತದೆ ಎಂದು ತಿಳಿಸಿದರು.
ಮಹಾಭಾರತವು ಐತಿಹಾಸಿಕ ಗ್ರಂಥವಾಗಿದೆ. ಇತಿಹಾಸದ ವಿಚಾರಗಳನ್ನು ಕೇಳುವುದರಿಂದ ನಮ್ಮಲ್ಲಿ ಬದಲಾವಣೆ ಆಗುತ್ತದೆ. ನಮ್ಮ ಪೂರ್ವಜರು ಸಾಗಿದ ಧರ್ಮ ಮಾರ್ಗದಲ್ಲಿ ನಾವೂ ಸಾಗಲು ಪ್ರೇರಣೆ ದೊರೆಯುತ್ತದೆ ಎಂದು ಹೇಳಿದರು.
ಜನಮೇಜಯನ ಕಥೆಯಿಂದ ಆರಂಭಿಸಿ ಧೌಮ್ಯ ಋಷಿಗಳು, ಶಿಷ್ಯಂದಿರಾದ ಆರಣಿ, ಉಪಮನ್ಯು, ಬೈದ ಮುಂತಾದವರ ಕಥೆಗಳನ್ನು ವಿದ್ಯಾಧೀಶ ಆಚಾರ್ಯರು ವಿವರಿಸಿದರು. ಋಷಿ ಮುನಿಗಳ ಸಾಧನೆ, ಗುರು ಸೇವೆ, ವಿದ್ಯಾರ್ಜನೆ ಹೀಗೆ ಹಲವು ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ ಎಂದು ತಿಳಿಸಿದರು.
ವಿಶ್ವ ಮಧ್ವ ಮಹಾ ಪರಿಷತ್ತಿನ ದಾವಣಗೆರೆ ಕೇಂದ್ರದ ಅಧ್ಯಕ್ಷ ಪಂಡಿತ ವೆಂಕಟಗಿರೀಶಾಚಾರ್ ಕಾರ್ಯಕ್ರಮ ನಿರ್ವಹಿಸಿದರು. ಕಂಪ್ಲಿ ಗುರುರಾಜಾಚಾರ್, ಪಾಂಡುರಂಗಾಚಾರ್ ಮಣ್ಣೂರು. ಗೋಪಾಲಾಚಾರ್, ರಾಮ ಗೋಪಾಲ ಕಟ್ಟಿ, ವೆಂಕಟೇಶ ನವರತ್ನ ಇನ್ನಿತರರು ಇದ್ದರು. ಕೃಷ್ಣಾಚಾರ ಮಣ್ಣೂರು ವಂದಿಸಿದರು. ಪರಿಷತ್ತಿನ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಭಾರತಿ ಭಜನಾ ಮಂಡಳಿಯ ಸದಸ್ಯರು ದೀಪಾಲಂಕಾರದ ವ್ಯವಸ್ಥೆ ಮಾಡಿದ್ದರು.
ವಿಶ್ವ ಮಧ್ವ ಮಹಾ ಪರಿಷತ್ತಿನ ದಾವಣಗೆರೆ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಆದಿಪರ್ವ ಮತ್ತು ಸಭಾ ಪರ್ವ ಪ್ರವಚನ ಮಾಲಿಕೆ ವರ್ಷವಿಡೀ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಜ್ಞಾನ ಕಾರ್ಯದ ಪ್ರಯೋಜನ ಪಡೆಯಬೇಕು ಎಂದು ವಿದ್ಯಾಧೀಶ ಆಚಾರ್ಯರು ಹೇಳಿದರು.
ಇದೇ ವೇಳೆ ಅವರು, ಯುವಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಉದ್ದೇಶದ ‘ಯುವಾತ್ಮ’ ತಂಡದ ಉದ್ಘಾಟನೆ ನೆರವೇರಿಸಿದರು.