ಹರಿಹರ, ಡಿ.7- ಜಿ.ಪಂ. ಪ್ರಾಜೆಕ್ಟ್ ಡೈರೆಕ್ಟರ್ ರೇಷ್ಮಾ ಕೌಸರ್ ಸ್ಥಳ ಪರಿಶೀಲನೆ ನಡೆಸಿ, ಅಂತಿಮವಾಗಿ ನಗರದ ಡಿ.ಆರ್.ಎಂ. ಪದವಿ ಕಾಲೇಜು ಕ್ಯಾಂಪಸ್ ಆವರಣದಲ್ಲಿ `ಅಕ್ಕ ಕೆಫೆ’ ಸ್ಥಾಪನೆ ಮಾಡುವುದಕ್ಕೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರವುದಾಗಿ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರ ಮಹಿಳಾ ಸಂಘದವರು ಸ್ವಾವಲಂಬನೆ ಜೀವನ ನಡೆಸಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ `ಅಕ್ಕ ಕೆಫೆ’ ಎಂಬ ವಿನೂತನ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಜಿಲ್ಲೆಯ ಎರಡು ಕಡೆಗಳಲ್ಲಿ ಅಕ್ಕ ಕೆಫೆ ಸ್ಥಾಪನೆ ಮಾಡಲು ಮಂಜೂರಾತಿ ಸಿಕ್ಕಿದ್ದು, ದಾವಣಗೆರೆ ನಗರದ ಅರುಣಾ ಟಾಕೀಸ್ ಎದುರು ಪಶುಪಾಲನೆ ಇಲಾಖೆ ಸ್ಥಳದಲ್ಲಿ ಸ್ಥಾಪನೆ ಮಾಡುವುದಕ್ಕೆ ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆದಿದೆ. ಶೀಘ್ರದಲ್ಲೇ ಉದ್ಘಾಟನೆ ಕೂಡ ಮಾಡಲಾಗುತ್ತದೆ.
ಹರಿಹರ ಗಿರಿಯಮ್ಮ ಪಿಯುಸಿ, ಪದವಿ ಕಾಲೇಜು, ಅಂಬೇಡ್ಕರ್ ಹೈಸ್ಕೂಲ್ ಮತ್ತು ಕಾಲೇಜು, ಇರುವುದರಿಂದ ಇಲ್ಲಿನ ಸ್ಥಳವನ್ನು ಆಯ್ಕೆ ಮಾಡಿದ್ದು,, ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಮತ್ತು ಸ್ಥಳೀಯ ಬಿಇಓ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಹರಿಹರ ಡಿ.ಆರ್.ಎಂ ಪದವಿ ಕಾಲೇಜು ಪ್ರಾಂಶುಪಾಲ ಪರಮೇಶ್ವರಪ್ಪ ಮಾತನಾಡಿ, ಕಾಲೇಜಿನಲ್ಲಿ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಅದರಲ್ಲಿ ಶೇ. 70 ರಷ್ಟು ಮಹಿಳೆಯರಿದ್ದಾರೆ. ಕಾಲೇಜ್ ಆವರಣದಲ್ಲಿ ಕೆಲವು ವ್ಯಾಪಾರಸ್ಥರು ತಾತ್ಕಾಲಿಕ ಶೆಡ್ ಹಾಕಿಕೊಂಡು ಹೋಟೆಲ್ ವ್ಯಾಪಾರ ಮಾಡುವುದಾಗಿ ಕೇಳಲಿಕ್ಕೆ ಬಂದಿದ್ದರು, ಆದರೆ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಇರುವಂತಹ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಇಲ್ಲಿಯವರೆಗೂ ಕ್ಯಾಂಟೀನ್ ಸ್ಥಾಪನೆ ಮಾಡಿರಲಿಲ್ಲ. ಈ ಸೌಲಭ್ಯದಿಂದ ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಿದಂತೆ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ. ಇಓ ಸುಮಲತಾ, ಜಿ.ಪಂ. ಪೋಗ್ರಾಂ ಮ್ಯಾನೇಜರ್ ಭೋಜರಾಜ್, ರಂಗಸ್ವಾಮಿ, ತಾ.ಪಂ. ಪೋಗ್ರಾಂ ಮ್ಯಾನೇಜರ್ ನಾಗರಾಜ್, ಶಾಂತಕುಮಾರಿ, ಉಪನ್ಯಾಸಕರಾದ ಯತೀಶ್, ಕುಮಾರ್, ಮಂಜುನಾಥ್, ಅಣ್ಣಪ್ಪ ಇತರರು ಹಾಜರಿದ್ದರು.