ನ್ಯಾ. ನಿವೇದಿತಾ
ದಾವಣಗೆರೆ, ಡಿ.6- ಮಹಿಳೆಯರ ಪಾತ್ರ ಜೀವನದಲ್ಲಿ ಬಹು ಮುಖ್ಯವಾದದ್ದು, ಮಹಿಳೆಯರು ದುಡಿಯುವುದರಿಂದ ದೇಶದ ಆರ್ಥಿಕ ಮಟ್ಟ ಸುಧಾರಣೆಯಾಗಿದ್ದು, ದುಡಿಯುವ ಹಣದಲ್ಲಿ ಸ್ವಲ್ಪ ಹಣವನ್ನು ಒಂದೊಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು. ಆ ಹಣ ಮುಂದೊಂದು ದಿನ ಅನುಕೂಲಕ್ಕೆ ಬರುತ್ತದೆ ಎಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಕರೆ ನೀಡಿದರು.
ನಗರದ ಇಂಡಸ್ಟ್ರೀಯಲ್ ಏರಿಯಾ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2005 ರ ನಂತರದಲ್ಲಿ ಬಂದಿರುವ ಕಾನೂನಿನ ನಿಯಮದ ಪ್ರಕಾರ ಮಹಿಳೆಯರು ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳುವಂತಹ ಅವಕಾಶವಿದೆ, ಮಹಿಳೆಯರಿಗೆ ವಿಶೇಷವಾದ ಸೇವೆಗಳು ಕಾನೂನಿನಲ್ಲಿವೆ ಲೋಕ ಅದಾಲತ್ ಸೇವೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಎಂ. ಮಾತನಾಡಿ, ದುಡ್ಡು ಇಲ್ಲದವನು ಬಡವನಲ್ಲ ಜೀವನದಲ್ಲಿ ನಿರ್ದಿಷ್ಟ ಗುರಿ ಕನಸು ಇಲ್ಲದವನು ಬಡವ, ಮಹಿಳೆಯರ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸದಾ ಸೇವೆ ನೀಡಲು ಸಿದ್ಧ,ಒಂದೊಳ್ಳೆ ಕಾರ್ಯಕ್ರಮದ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಬಹು ಮುಖ್ಯವಾದದ್ದು,ಜ್ಞಾನ ವಿಕಾಸ ಕಾರ್ಯಕ್ರಮದ ಮುಖಾಂತರ ಮಹಿಳೆಯರಿಗೆ ಕುಟುಂಬ ನಿರ್ವಹಣೆ,ಕಾನೂನು ಅರಿವು,ಇಲಾಖೆ ಪರಿಚಯ,ಉತ್ತಮ ಆರೋಗ್ಯ ನಿರ್ವಹಣೆಗೆ ತರಬೇತಿಗಳ ಮುಖಾಂತರ ಮಹಿಳೆಯರ ಸಬಲೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ, ವಕೀಲರಾದ ಅನಿತಾ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಮನೆಯಲ್ಲಿ ಮಕ್ಕಳಿಗೆ ಮೊದಲ ಗುರುವಾಗಿ ಮಕ್ಕಳನ್ನು ಪೋಷಿಸಬೇಕು, ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಪಿಎಸ್ಐ ಪಿ.ಸಿ. ಲಲಿತಾ, ಯೋಜನಾಧಿಕಾರಿ ಶ್ರೀನಿವಾಸ್ ಬಿ, ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಆನಂದ್, ಹನುಮಂತಪ್ಪ, ಶೈಲಾ ನಾಗರಾಜ್, ಯೋಜನೆಯ ಸಿಬ್ಬಂದಿಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.