ಜಿ. ಜಗದೀಶ್ ಮಾಯಕೊಂಡ
ಸತತ ಮೂರು ದಶಕಗಳಿಂದ ಕಾಯಕಲ್ಪಕ್ಕೆ ಕಾದಿದ್ದ, ಆನಗೋಡಿನ ರೈತ ಹುತಾತ್ಮರ ಸ್ಮಾರಕಕ್ಕೆ ಅಭಿವೃದ್ಧಿಯ ಅಭಯ ಹಸ್ತ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಸರ್ಕಾರದಿಂದ ರೂ. 40 ಲಕ್ಷ ಅನುದಾನ ಬಿಡುಗಡೆ ಮಾಡಿಸಿ, ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.
1992ರಲ್ಲಿ ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಚಳವಳಿ ನಡೆಸಿ, ಪೊಲೀಸ್ ಗೋಲಿಬಾರ್ಗೆ ಎದೆಕೊಟ್ಟು ಹುತಾತ್ಮರಾದ ಸಿದ್ದನೂರು ನಾಗರಾಜಚಾರ್, ಓಬೇನಹಳ್ಳಿ ಕಲ್ಲಿಂಗಪ್ಪ ಸಮಾಧಿ ಇನ್ನು ಮುಂದೆ ಹುತಾತ್ಮರ ಸ್ಮಾರಕವಾಗಿ, ಜಿಲ್ಲೆಯ ರೈತ ಹೋರಾಟದ ಸಾಕ್ಷಿಪ್ರಜ್ಞೆಯಾಗಬೇಕು ಎಂಬುದು ರೈತ ಹೋರಾಟಗಾರರ ಆಶಯ.
ಹೋರಾಟದ ಹಾದಿಯ ಕಹಿ ನೆನಪು: ಪಿ.ವಿ. ನರಸಿಂಹರಾವ್ ಸರ್ಕಾರ ರಸಗೊಬ್ಬರ ಬೆಲೆ ಏರಿಸಿದ್ದರ ವಿರುದ್ಧ ರೈತ ಸಂಘಟನೆಗಳು ಉಗ್ರ ಪ್ರತಿಭಟನೆಗೆ ಮುಂದಾದವು. ಆನಗೋಡು ಬಳಿ ಕೆಲವು ದಿನ ರಾಷ್ಟ್ರೀಯ ಹೆದ್ದಾರಿ ತಡೆದು, ಟೈರ್ಗೆ ಬೆಂಕಿಯಿಟ್ಟು ಸರ್ಕಾರಕ್ಕೇ ನಡುಕ ಹುಟ್ಟಿಸಿದ್ದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್ನಿಂದ ಸಿದ್ದನೂರು ನಾಗಲಿಂಗಾಚಾರ್ ಮತ್ತು ಓಬಣ್ಣನಹಳ್ಳಿ ಕಲ್ಲಿಂಗಪ್ಪ ಮೃತಪಟ್ಟಿದ್ದರು. ಮೃತರನ್ನು ಆನಗೋಡು ಹೆದ್ದಾರಿ ಮತ್ತು ಹೊಸದುರ್ಗಕ್ಕೆ ತೆರಳುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸಮಾಧಿ ಮಾಡಲಾಗಿತ್ತು. ಸಮಾಧಿ ಹೆದ್ದಾರಿ ವಿಸ್ತರಣೆಯಿಂದಾಗಿ ಸ್ಥಳಾಂತರವಾಯಿತು.
1992 ರಿಂದ ಇಲ್ಲಿಯವರೆಗೂ ಎನ್.ಜಿ. ಪುಟ್ಟಸ್ವಾಮಿ ನೇತೃತ್ವದಲ್ಲಿ ಎಲ್ಲಾ ರೈತ ಸಂಘಟನೆಗಳು ಸ್ವಂತ ಖರ್ಚಿನಲ್ಲಿ ರೈತ ಹುತಾತ್ಮರ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ರೈತ ಒಕ್ಕೂಟದ ಮುಖಂಡರಾದ ಹೆಚ್. ನಂಜುಂಡಪ್ಪ, ಹೊನ್ನೂರು ಮುನಿಯಪ್ಪ, ಕಕ್ಕರಗೊಳ್ಳ ಕಲ್ಲಿಂಗಪ್ಪ, ಆವರಗೆರೆ ರುದ್ರಮುನಿ, ಶಾಮನೂರು ಹೆಚ್.ಆರ್. ಲಿಂಗರಾಜ್, ಷಣ್ಮುಖಯ್ಯ, ಶೇಖರನಾಯ್ಕ, ಬುಳ್ಳಾಪುರ ಹನುಮಂತಪ್ಪ ಮತ್ತಿತರರು ಸ್ಮರಿಸುತ್ತಾರೆ.
ಹೆದ್ದಾರಿ ಅಗಲೀಕರಣದಿಂದ ಹುತಾತ್ಮರ ಸಮಾಧಿ ಸ್ಥಳಾಂತರಿಸಲಾಯಿತು. ಹೆದ್ದಾರಿಗೆ ಹೊಂದಿಕೊಂಡ ಪ್ರಿಯದರ್ಶಿನಿ ಉದ್ಯಾನದ ಪಕ್ಕದಲ್ಲಿ ಸುಮಾರು 1 ಎಕರೆ ಜಮೀನಿನಲ್ಲಿ ಹುತಾತ್ಮರ ಸಮಾಧಿ ಮರುನಿರ್ಮಾಣ ಮಾಡಲಾಗಿದೆ. ಸ್ಮಾರಕದ ಬಳಿ ರೈತರಿಗೆ ವಸತಿ ಭವನ ಅಧ್ಯಯನ ಕೇಂದ್ರ, ಸಂಶೋಧನಾ ಕೇಂದ್ರ, ಮ್ಯೂಸಿಯಂ ನಿರ್ಮಾಣ ಮಾಡಿ ಇದನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು ಎಂಬುದು ರೈತ ಒಕ್ಕೂಟಗಳ ಒತ್ತಾಸೆ.