ದಾವಣಗೆರೆ, ಡಿ.6- ಪತಿಯಿಂದ ದೂರವಾಗಿರುವ, ವಿಧವೆ ಹಾಗೂ ವಿವಾಹವಾಗದೇ ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಒಂಟಿ ಮಹಿಳೆಯರಿಗೆ ವಿಶೇಷವಾಗಿ ಪ್ರತ್ಯೇಕ ರೇಷನ್ ಕಾರ್ಡ್ ನೀಡುವಂತೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಒತ್ತಾಯಿಸಿದೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಗಿ, ಜೋಳ, ತೊಗರಿ ಬೇಳೆ, ಎಣ್ಣೆಯನ್ನು ನ್ಯಾಯ ಬೆಲೆ ಅಂಗಡಿ ಮೂಲಕ ವಿತರಿಸಬೇಕು. ನಿಜವಾದ ಬಡವರಿಗೆ ತಕ್ಷಣ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಲಾಯಿತು.
ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಬಜೆಟ್‌ನಲ್ಲಿ ಮೀಸಲಿಡಬೇಕಾದ ಹಣವನ್ನು ಕೇಂದ್ರ ಸರ್ಕಾರ ಪ್ರತಿ ವರ್ಷ ಕಡಿಮೆ ಮಾಡುತ್ತಾ ಬಂದಿರುವುದು ಸರಿಯಲ್ಲ. ಈ ಬಾರಿ ಬಜೆಟ್‌ನಲ್ಲಿ 2 ಲಕ್ಷ ಕೋಟಿ ಹಣ ಮೀಸಲಿಡಬೇಕು. ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಒಂದು ಕುಟುಂಬಕ್ಕೆ 200 ದಿನಗಳ ಕೆಲಸ ಖಾತ್ರಿಗೊಳಿಸಬೇಕು. ಕನಿಷ್ಠ ವೇತನ 600 ರೂ. ನೀಡಬೇಕು. ಕಾರ್ಮಿಕರು ಕೆಲಸ ಮಾಡುವ ವೇಳೆ ಮರಣ ಹೊಂದಿದರೆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ನಾಗರತ್ನ, ಕೆ.ಶಶಿಕಲಾ, ದುರುಗಮ್ಮ, ಸುಧಾ ಪಿ.ಎಸ್., ಮಂಜುಳಮ್ಮ, ಪರಶುರಾಮಪ್ಪ, ನಾಗರಾಜ್, ಹನುಮಂತಪ್ಪ, ರಾಜು ಇತರರು ಇದ್ದರು.