ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಪೂಜ್ಯಶ್ರೀ ಬಸವೇಶ್ವರಿ ಮಾತಾಜಿ

ದಾವಣಗೆರೆ, ಡಿ. 6- ರಂಗಭೂಮಿ ಕಲಾವಿದರು ಇಂದು ತುಂಬಾ ಕಷ್ಟದಲ್ಲಿದ್ದಾರೆ. ಅಂತಹ ಕಲಾವಿದರುಗಳಿಗೆ ಸರ್ಕಾರ ಮತ್ತು ಸಾರ್ವಜನಿಕ ಪ್ರೇಕ್ಷಕ ಪ್ರಭುಗಳು ಪ್ರೋತ್ಸಾಹ ನೀಡಬೇಕೆಂದು ಮುಂಡಗೋಡು ತಾಲ್ಲೂಕು ಅತ್ತಿವೇರಿ ಬಸವ ಧಾಮದ ಪೂಜ್ಯಶ್ರೀ ಬಸವೇಶ್ವರಿ ಮಾತಾಜಿ ಕರೆ ನೀಡಿದರು. 

ನಗರದ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ   ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ  ನಗರದ ಶ್ರೀ ಶಿವಕುಮಾರ ಸ್ವಾಮಿ ಬಡಾವಣೆ ಎರಡನೇ ಹಂತದಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ `ಕಿವುಡ ಮಾಡಿದ ಕಿತಾಪತಿ’ ಎಂಬ ಸಾಮಾಜಿಕ ನಾಟಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿಕೊಂಡು ತಬಲಾ ನುಡಿಸುವುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯರಿಗೆ, ಸಂಸಾರದಲ್ಲಿ ಬಳಲಿರುವ ಜೀವಿಗಳಿಗೆ ಕಲೆ ಸಂಜೀವಿನಿಯಾಗಿದೆ. ಮಹಾತ್ಮ ಗಾಂಧೀಜಿ, ರಾಮಕೃಷ್ಣ ಪರಮಹಂಸರು ಕೂಡ ನಾಟಕಗಳನ್ನು ನೋಡಿ ಪ್ರಭಾವಿತರಾದವರು. ಕಲೆಯ ಸಾಹಿತ್ಯ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿದೆ. ಕಲಾವಿದರಿಗೆ ಸಾವಿರಾರು ಪ್ರೇಕ್ಷಕರನ್ನು ರಂಜಿಸುವ ಶಕ್ತಿ ಇದೆ. ಇಂತಹ ಕಲಾವಿದರು ಇಂದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಮತ್ತು ಸಾರ್ವಜನಿಕರು ನಾಟಕಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಇಂತಹ ಕಲಾವಿದರ ಕೈ ಹಿಡಿದು ಮೇಲೆ ತ್ತುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಖಾದರ್ ಪಿ. ಮತ್ತು ಸಂಗಡಿಗರು ಅಭಿನಯಿಸಿದ ಕಿವುಡ ಮಾಡಿದ ಕಿತಾಪತಿ ಎಂಬ ನಾಟಕವನ್ನು ಜನ ನೋಡಿ ಸಂತೋಷಗೊಂಡರು. 

ಈ ಸಂದರ್ಭದಲ್ಲಿ ಟಿ. ಹನುಮಂತಪ್ಪ, ಬಿ ತಿಮ್ಮಣ್ಣ, ಜಿ. ಪರಮೇಶ್ವರಪ್ಪ, ರವೀಂದ್ರ ಸ್ವಾಮಿ, ಮಂಡ್ಲೂರು ಬಸವರಾಜಪ್ಪ, ಶಶಿಧರ್ ಬಸಾಪುರ ಮತ್ತಿತರರು ಭಾಗವಹಿಸಿದ್ದರು. ಬಿ.ರತ್ನ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರಾದ ಎನ್.ಎಸ್. ರಾಜು ಸ್ವಾಗತಿಸಿದರು. ಮಮತಾ ಸಿ. ಕಾರ್ಯಕ್ರಮ ನಿರೂಪಿಸಿದರು.

error: Content is protected !!