ದಾವಣಗೆರೆ, ಡಿ.6- ಶ್ರೀ ಪದ್ಮನಾಭ ತೀರ್ಥರು ಮಧ್ವ ಸಿದ್ಧಾಂತವನ್ನು ಉತ್ತಮ ರೀತಿಯಲ್ಲಿ ಪ್ರಕಾಶ ಪಡಿಸಿದವರು ಎಂದು ಪಂಡಿತ ಗೋಪಾಲಾಚಾರ್ ಮಣ್ಣೂರು ಹೇಳಿದರು.
ನಗರದ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಭಾನುವಾರ, ಶ್ರೀ ಪದ್ಮನಾಭ ತೀರ್ಥರ ಆರಾಧನೆ ಅಂಗವಾಗಿ ನಡೆದ ಪ್ರವಚನವನ್ನು ಅವರು ನೀಡಿದರು.
ಪದ್ಮನಾಭ ತೀರ್ಥರು, ವಾಯುದೇವರ ಅವತಾರವಾದ ಶ್ರೀ ಮಧ್ವಾಚಾರ್ಯರ ಪ್ರಥಮ ಶಿಷ್ಯರಾಗಿದ್ದರು. ಇವರ ಪೂರ್ವಾಶ್ರಮದ ಹೆಸರು ಶೋಭನ ಭಟ್ಟರು. ವೇದ ಶಾಸ್ತ್ರ ಮತ್ತು ತರ್ಕ ಶಾಸ್ತ್ರದಲ್ಲಿ ಉದ್ದಾಮ ಪಂಡಿತರಾಗಿದ್ದರು. ಆ ಕಾಲದ ಅನೇಕ ಪಂಡಿತರು ಇವರನ್ನು ‘ವಿದ್ವತ್ ತಿಮಿಂಗಲ’ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.
ಶ್ರೀ ಮಧ್ವಾಚಾರ್ಯರ ಅಗಾಧ ಪಾಂಡಿತ್ಯಕ್ಕೆ ತಲೆದೂಗಿ ಅವರಿಂದ ವೈಷ್ಣವ ದೀಕ್ಷೆ ಹೊಂದಿ ಅವರ ಶಿಷ್ಯರಾದರು. ಇವರ ಪಾಂಡಿತ್ಯ ಮತ್ತು ಜ್ಞಾನವನ್ನು ಮನಗಂಡು ಮಧ್ವಾಚಾರ್ಯರು ಇವರಿಗೆ ಆಶ್ರಮ ಕೊಟ್ಟು ಪದ್ಮನಾಭ ತೀರ್ಥರು ಎಂದು ನಾಮಕರಣ ಮಾಡಿದರು ಎಂದರು.
ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದಿರುವುದು ಸೇರಿದಂತೆ 15 ಕೃತಿಗಳನ್ನು ರಚಿಸಿದ್ದಾರೆ. ಇದೇ ಪರಂಪರೆಯಲ್ಲಿ ಬಂದವರಾದ ಶ್ರೀ ಜಯತೀರ್ಥರು ಪದ್ಮನಾಭ ತೀರ್ಥರಿಂದ ಪ್ರಭಾವಿತರಾಗಿದ್ದರು ಎಂದು ಹೇಳಿದರು.
ಏಳು ವರ್ಷಗಳ ಕಾಲ ಆಶ್ರಮದಲ್ಲಿದ್ದ ಪದ್ಮನಾಭ ತೀರ್ಥರು, ಒಂದರ್ಥದಲ್ಲಿ ಎಲ್ಲ ಮಾಧ್ವ ಪೀಠಗಳಿಗೆ ಮೂಲ ಪುರುಷರು. ಇವರ ವೃಂದಾವನ ಆನೆಗೊಂದಿಯ ನವ ವೃಂದಾವನ ಗಡ್ಡಿಯಲ್ಲಿದೆ ಎಂದು ತಿಳಿಸಿದರು.
ಶ್ರೀ ಪದ್ಮನಾಭತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಬೆಳಗ್ಗೆ ವಾಯುಸ್ತುತಿ ಪುರಶ್ಚರಣ, ನಂದಕಿಶೋರ ಭಜಾನಾ ಮಂಡಳಿಯಿಂದ ಭಜನೆ ನಡೆಯಿತು. ಸರ್ವಜ್ಞಾಚಾರ್ಯ ಸೇವಾ ಸಂಘದ ಕಾರ್ಯದರ್ಶಿ ಪ್ರಾಣೇಶ್ ಕಟ್ಟಿ, ತಾಡಪತ್ರಿ ವೆಂಕಟಗಿರಿ, ಪ್ರಕಾಶ್ ಪಾಟೀಲ್, ಆನಂದ ತೀರ್ಥಾಚಾರ್, ರಘುನಾಥ್ ಇತರರು ಇದ್ದರು.