ಹರಪನಹಳ್ಳಿಯಲ್ಲಿನ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿಯಲ್ಲಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ, ಡಿ.6- ಕುಸ್ತಿ ಕ್ರೀಡೆ ದೇಶದ ಕಲೆಯಾಗಿದ್ದು, ಈ ಕ್ರೀಡೆ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಶಕ್ತಿ ಮತ್ತು ಯುಕ್ತಿಯ ಸಮ್ಮಿಲನ ಕುಸ್ತಿಯಲ್ಲಿ ಕಾಣಬಹುದು. ಯಾವ ಆಯುಧವನ್ನೂ ಬಳಸದೇ ಒಬ್ಬರನ್ನೊಬ್ಬರು ಸೆಣಸಿ ಗೆಲ್ಲುವ ಈ ಕ್ರೀಡೆಗೆ ದೇಶದಲ್ಲಿ ಇತಿಹಾಸವಿದೆ. ಆದರೆ ಪ್ರಸ್ತುತ ಗರಡಿ ಮನೆಗಳು ಮರೀಚಿಕೆಯಾಗಿ ಜಿಮ್‌ಗಳು ತಲೆ ಎತ್ತಿವೆ ಎಂದು ಹೇಳಿದರು.
ಒಲಂಪಿಕ್‌ನಲ್ಲಿ ದೇಶಕ್ಕೆ ಕುಸ್ತಿಯಿಂದಲೇ ಹೆಚ್ಚು ಪದಕಗಳು ಬಂದಿವೆ. ಹಂಪಿ ಉತ್ಸವದ ರೂವಾರಿಯಾಗಿದ್ದ ಎಂ.ಪಿ.ಪ್ರಕಾಶರವರು ಕುಸ್ತಿಗೆ ಆದ್ಯತೆ ನೀಡಿದ್ದರು ಎಂದ ಅವರು, ಸೌಹಾರ್ದತೆಯಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾಭಿಮಾನ ತೋರಿಸಿ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಸತೀಶ್ ಮಾತನಾಡಿ, ಊರಿನ ಪ್ರತಿಷ್ಠೆಯ ಕೇಂದ್ರಗಳಾಗಿದ್ದ ವ್ಯಾಯಾಮ ಶಾಲೆಗಳ ಪೈಕಿ ಬಹುತೇಕ ಶಾಲೆಗಳಲ್ಲಿ ಈಗ ಕುಸ್ತಿ ಪೈಲ್ವಾನರು ತಯಾರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೀಡಾಪಟುಗಳಲ್ಲಿ ಶ್ರಮ, ಏಕಾಗ್ರತೆ ಮತ್ತು ಗುರಿ ಬಹಳ ಮುಖ್ಯ. ಇಂತಹ ಪಟುಗಳಿಗೆ ಗುಣಮಟ್ಟದ ತರಬೇತಿ ಸಿಕ್ಕಾಗ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಸಾಧನೆ ಮಾಡಲು ಸಾಧ್ಯ ಎಂದರು.
ಇದೇ ವೇಳೆ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರು ಹಾಗೂ ರಸ್ತೆ ಬದಿ ಲೈಟಿಂಗ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ದೈಹಿಕ ಶಿಕ್ಷಣ ನಿರ್ದೆಶಕ ಹೆಚ್. ಕೋಟ್ರೇಶ, ಕಸಾಪ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಡಾ. ಶಾಂತನಾಯ್ಕ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಆರ್ ಹವಳದ್, ಕೂಡ್ಲಿಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಷಣ್ಮುಖಗೌಡ, ಹೂವಿನ ಹಡಗಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ವಿಜಯಕುಮಾರ, ಕೊಟ್ಟೂರಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ. ರವಿಕುಮಾರ, ವಕೀಲರಾದ ಕೆ.ಎಂ. ಚಂದ್ರಮೌಳಿ, ಡಾ.ಎಂ.ಸುರೇಶ, ಡಾ. ಹಾರಳ್ ಬುಳ್ಳಪ್ಪ, ಹುಚ್ಚರಾಯಪ್ಪ ಪುನೀತ ಇತರರು ಇದ್ದರು.