ಹರಿಹರದ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಪದ್ಮಶ್ರೀ ಮುನ್ನೋಳಿ
ಹರಿಹರ, ಡಿ.6- ಪವಿತ್ರ ವಕೀಲ ವೃತ್ತಿಯ ಮೂಲಕ ಜನ ಸಾಮಾನ್ಯರ ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಿದೆ ಎಂದು ಇಲ್ಲಿನ ಹಿರಿಯ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಪದ್ಮಶ್ರೀ ಮುನ್ನೋಳಿ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಈಚೆಗೆ ವಕೀಲರ ಸಂಘದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನುಗಳ ಸಹಾಯದಿಂದ ತಮ್ಮ ಕಕ್ಷಿದಾರರಿಗೆ ಅಗತ್ಯ ಸೇವೆ ನೀಡುತ್ತಲೇ ನಮ್ಮ ಸುತ್ತ-ಮುತ್ತಲಿನ ವಾತಾವರಣದಲ್ಲಿ ಜನ ಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸುವ ಶಕ್ತಿ ವಕೀಲರಿಗಿದೆ ಎಂದರು.
ದೇಶದ ಕಾನೂನು ಮತ್ತು ಕಾಯ್ದೆಗಳಿಗೆ ಸಂವಿಧಾನವೇ ಅಡಿಪಾಯವಾಗಿದೆ ಮತ್ತು ಈ ಲಿಖಿತ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಬಿ. ಆನಂದ ಕುಮಾರ್ ಮಾತನಾಡಿ, ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ವಕೀಲರ ಭವನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಜನಪ್ರತಿನಿಧಿಗಳ ಸಹಕಾರದಿಂದ ಈ ಯೋಜನೆ ಜಾರಿಗೊಳಿಸಬೇಕಿದೆ. ವಕೀಲರ ಭವನ ಇಲ್ಲದೆ ವಕೀಲರ ಸಂಘದ ಚಟುವಟಿಕೆಗಳನ್ನು ನಡೆಸಲು ಅಡಚಣೆಯಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ವಕೀಲ ಮಾರುತಿ ಬೇಡರ್ ಅವರನ್ನು ಸತ್ಕರಿಸಲಾಯಿತು. ಕ್ರೀಡೆಗಳಲ್ಲಿ ವಿಜೇತರಾದ ವಕೀಲರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಭಾರ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವೀಣಾ ಕೋಳೆಕರ, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಧೀಶರಾದ ಜ್ಯೋತಿ ಅಶೋಕ್ ಪತ್ತರ್, ಸಂಘದ ಉಪಾಧ್ಯಕ್ಷೆ ಕೆ.ಎಸ್.ಶುಭ, ಕಾರ್ಯದರ್ಶಿ ಕೆ.ವಿ. ನಾಗರಾಜ್, ಸಹ ಕಾರ್ಯದರ್ಶಿ ಬಿ.ಸಿ. ಪ್ರಕಾಶ್, ಹಿರಿಯ ವಕೀಲರಾದ ಬಿ. ಹಾಲಪ್ಪ, ಕಿತ್ತೂರು ಶೇಖ್ ಇಬ್ರಾಹಿಂ, ಎಚ್.ಎಂ.ಷಡಕ್ಷರಯ್ಯ, ಎಸ್. ಪ್ರಸನ್ನಕುಮಾರ್, ಬಿ. ನಾಗರಾಜ್, ನಾಗೇಂದ್ರಪ್ಪ, ನಾಗರಾಜ್ ಹಲವಾಗಲು, ಪಿ. ರುದ್ರಗೌಡ, ಮಂಜಣ್ಣ ಇತರರು ಇದ್ದರು.