ಮಲೇಬೆನ್ನೂರು, ಡಿ.8- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಭಾನುವಾರ ಸಂಜೆ ತುಂಗಭದ್ರಾ ನದಿಗೆ ಮಹಾಮಂಗಳಾರತಿ ಪೂಜೆಯನ್ನು 2ನೇ ಬಾರಿಗೆ ಸಂಭ್ರಮದಿಂದ ಮಾಡಲಾಯಿತು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಪುಣ್ಯಕೋಟಿ ಮಠದ ಬಾಲಯೋಗಿ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಪವಾಡ ಪುರುಷ
ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯನ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ನದಿ ದಡದಲ್ಲಿ ನಿರ್ಮಿಸಿದ್ದ ಹೂವಿನಮಂಟಪದಲ್ಲಿ ಪ್ರತಿಷ್ಠಾಪಿಸಿದ ನಂತರ ತುಂಗ ಮತ್ತು ಭದ್ರಾ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ತುಂಗಭದ್ರಾ ನದಿಗೆ ಮಹಾಮಂಗಳಾರತಿ ಪೂಜೆ ನೆರವೇರಿಸಲಾಯಿತು.
ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್, ಸದಸ್ಯರಾದ ಜಿಗಳಿ ಇಂದೂಧರ್ ಪ್ರಕಾಶ್ ಕೊಟೇರ್, ಬಸವನಗೌಡ್ರು, ಗದಿಗೆಯ್ಯ ಪಾಟೀಲ್, ಮುಖಂಡರಾದ ಹಳ್ಳಿಹಾಳ್ ವೀರನಗೌಡ, ಹುಲ್ಲತ್ತಿ ರುದ್ರಗೌಡ, ಜಿಗಳೇರ ಹಾಲೇಶಪ್ಪ, ವಕೀಲ ನಂದಿತಾವರೆ ತಿಮ್ಮನಗೌಡ ಮತ್ತಿತರರು ಈ ವೇಳೆ ಹಾಜರಿದ್ದರು.
ಬೆಳ್ಳಿ ರಥೋತ್ಸವ : ಉಕ್ಕಡಗಾತ್ರಿಯಲ್ಲಿ ನಾಳೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ಏರ್ಪಡಿಸಿದ್ದು, 11 ಗಂಟೆಗೆ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ಜರುಗಲಿದೆ.
ರಾತ್ರಿ 8 ಗಂಟೆಗೆ ಅಜ್ಜಯ್ಯನ ಗದ್ದುಗೆಗೆ ಮಹಾಪೂಜೆ, ಮಹಾಮಂಗಳಾರತಿ ನಂತರ ಅಜ್ಜಯ್ಯನ ಉತ್ಸವ ಮೂರ್ತಿಯ ಪಾಲಿಕೋತ್ಸವ ಮತ್ತು ಕಾರ್ತಿಕೋತ್ಸವ ವಿವಿಧ ವಾದ್ಯಗಳೊಂದಿಗೆ ನಡೆಯಲಿದೆ.