ಜಿಲ್ಲೆಯ ಕೆರೆಗಳ ಕಾಯಕಲ್ಪಕ್ಕೆ ಒತ್ತಾಯ

ಜಿಲ್ಲೆಯ ಕೆರೆಗಳ ಕಾಯಕಲ್ಪಕ್ಕೆ ಒತ್ತಾಯ

ದಾವಣಗೆರೆ, ಡಿ. 5-  ಜಿಲ್ಲೆಯ ಕೆರೆಗಳ ಕಾಯಕಲ್ಪ ಹಾಗೂ ಅಭಿವೃದ್ಧಿ  ವಿಚಾರವಾಗಿ ತುರ್ತು ಸಭೆ ಕರೆಯುವಂತೆ ನೆಲ ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಜಿಲ್ಲೆಯಲ್ಲಿ  538 ಕೆರೆಗಳಿದ್ದು, ಅದರಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಕೆರೆಗಳು ಬೃಹತ್ ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯ ಕೆರೆಗಳೂ ಸೇರಿರುತ್ತವೆ.  2024ರ ಮಳೆಗಾಲದ ಹಂಗಾಮಿನಲ್ಲಿ 235 ಕೆರೆಗಳು ಮಾತ್ರ ತುಂಬಿದ್ದು, ಇನ್ನುಳಿದ ಕೆರೆಗಳಲ್ಲಿ ಶೇ. 30-50ರಷ್ಟು ಮಾತ್ರ ನೀರು ತುಂಬಿದೆ. ಉಳಿದ ನೀರು ಕೆರೆಗೆ ಬರುವ ಮೂಲ ಒತ್ತುವರಿಯಾಗಿ ಕೆರೆಗೆ ಬರುವ ನೀರು ಬಾರದೇ, ಸಮುದ್ರ ಸೇರಿರುತ್ತದೆ. 

538 ಕೆರೆಗಳಿಂದ 40 ಟಿಎಂಸಿ ನೀರು ಸಂಗ್ರಹವಾಗಬೇಕಾಗಿದ್ದು, ಕೇವಲ 17 ಟಿಎಂಸಿ ಮಾತ್ರ ಕೆರೆಗೆ ಶೇಖರಣೆಯಾಗಿದ್ದು, ಉಳಿದ 23 ಟಿಎಂಸಿ ನೀರು ಸಂಬಂಧಿಸಿದ ಇಲಾಖೆಯವರ ಬೇಜಾವಾಬ್ದಾರಿಯಿಂದ ನೀರು ಸಮುದ್ರದ ಪಾಲಾಗಿದೆ. 

ಆದ್ದರಿಂದ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಪಡುವ ಬದಲು ಬೇಸಿಗೆ ಬರುವ 3 ತಿಂಗಳ ಮೊದಲೇ ಸಭೆ ಕರೆದು ಸಂಬಂಧಿಸಿದ ಇಲಾಖೆ ಹೂಳು ತೆಗೆಯುವುದು, ಏರಿಯನ್ನು ಭದ್ರಗೊಳಿ ಸುವುದು, ಮುಖ್ಯ ಕಾಲುವೆಗಳನ್ನು ಸ್ವಚ್ಛಗೊಳಿಸುವುದು ಹಾಗೂ ಒತ್ತುವರಿ  ತೆರವುಗೊಳಿಸುವುದು, ನೀರು ಬರುವ ಮಾರ್ಗವನ್ನು ಸರಳಿಕರಣಗೊಳಿಸುವುದು ಸೇರಿದಂತೆ ಈ ಎಲ್ಲಾ ವಿಷಯಗಳ ಬಗ್ಗೆ ತುರ್ತು ಸಭೆ ಕರೆಯಬೇಕೆಂದು ಸಮಿತಿ ಒತ್ತಾಯಿಸಿ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಸಂಚಾಲಕ ಬಲ್ಲೂರು ರವಿಕುಮಾರ್, ಜಿಲ್ಲಾ ಸಂಚಾಲಕರಾದ ಮಿಯಾಪುರದ ತಿರುಮಲ್ಲೇಶ್, ಹೆಬ್ಬಾಳು ರಾಜಯೋಗಿ, ತಾಲ್ಲೂಕು ಸಂಚಾಲಕ ಸಾಣೇಹಳ್ಳಿ ಗುರುಮೂರ್ತಿ ಉಪಸ್ಥಿತರಿದ್ದರು.

error: Content is protected !!