ಹರಪನಹಳ್ಳಿ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಕೆ. ಸತೀಶ್
ಹರಪನಹಳ್ಳಿ, ಡಿ. 5- ಕನ್ನಡ ನಾಡಿನ ಸೇವೆ ನಮ್ಮ ಮನೆಯ ಕೆಲಸವಾಗಬೇಕು. ಓದುಗರೆಲ್ಲ ವೀಕ್ಷಕರಾಗಿ ಬದಲಾದ ಈ ಕಾಲಘಟ್ಟದಲ್ಲಿ ದತ್ತಿ ಉಪನ್ಯಾಸಗಳು ಹೆಚ್ಚಿನ ಮಹತ್ವ ಪಡೆಯುತ್ತಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಕೆ. ಸತೀಶ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀಮತಿ ಚಿಗಟೇರಿ ಬಾರಿಕರ ಅಂಬಮ್ಮ ಮತ್ತು ಹನುಮಂತಪ್ಪ ದತ್ತಿ, ಮೈದೂರು ಶ್ರೀಮತಿ ಸಾವಿತ್ರಮ್ಮ ಕೆ. ರಾಮಪ್ಪ ದತ್ತಿ, ಶ್ರೀ ಹಾಲನಾಯ್ಕ ಲಷ್ಕರಿನಾಯ್ಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಶ್ರೀಮಂತ ಭಾಷೆ, ಕನ್ನಡ ಭಾಷೆ ಬಳಕೆ ಸಮೃದ್ಧವಾಗಬೇಕು, ಅನ್ಯ ಭಾಷೆ ವ್ಯವಹಾರಕ್ಕೆ ಸೀಮಿತವಾಗ ಬೇಕು. ಜನಸೇವೆ ತೋರಿಕೆಗೆ ಆಗದೇ ಜನಪರವಾಗಿರಬೇಕು. ಹಿರಿಯರ ನೆನಪಿಗಾಗಿ ಅವರ ಹೆಸರಲ್ಲಿ ದತ್ತಿ ಕಾರ್ಯಕ್ರಮ ನಡೆಸುವುದು ಶ್ಲ್ಯಾಘನೀಯ ಕಾರ್ಯ. ಇದರಿಂದ ಕನ್ನಡ ಭಾಷೆಯ ಬೆಳೆವಣಿಗೆಯೂ ಆಗುತ್ತದೆ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲ ನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರು ತಮ್ಮ ಭಾಷೆಗೆ ಸಮರ್ಪಿಸಿ ಕೊಳ್ಳುವ ಕೆಲಸವನ್ನು ಪ್ರತಿನಿತ್ಯವೂ ಮಾಡಲಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ, ಕನ್ನಡಿಗ-ಕರ್ನಾಟಕಕ್ಕೆ ದುಡಿಯುವ ಸಂಸ್ಥೆಯಾಗಿದ್ದು, ನಿರಂತರವಾಗಿ ಕನ್ನಡವನ್ನು ಜಾಗೃತಿಗೊಳಿಸುತ್ತಿರುವ ಸಂಸ್ಥೆಯಾ ಗಿದೆ. ವಿದ್ಯಾರ್ಥಿಗಳು ಕನ್ನಡದ ಇತಿಹಾಸದ ಬಗ್ಗೆ ತಿಳಿದು ಕೊಂಡು ಕನ್ನಡದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಸಾಹಿತ್ಯ ಪರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಡವಿ ಮಲ್ಲನಕೇರಿ ಸರ್ಕಾರಿ ಪ್ರೌಢಾಶಾಲಾ ಕನ್ನಡ ಶಿಕ್ಷಕಿ ಕೆ. ಮುಮ್ತಾಜ್ ಬೇಗಂ ಜಾನಪದ ಸಾಹಿತ್ಯ ಮತ್ತು ಕಲೆ ಕುರಿತು ಮಾತನಾಡಿ, ಜನಪದ ಸಾಹಿತ್ಯವು ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನ ಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೆಲ್ಲಾ ಜನಪದ ಸಾಹಿತ್ಯದಲ್ಲಿ ಕಾಣಬಹುದು. ನವರಸಗಳನ್ನೂ ಒಳಗೊಂಡಿರುವ ಮೂಲ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಪರಿಷತ್ತಿನ ಉದ್ದೇಶಗಳಲ್ಲಿ ಒಂದು. ಅನೇಕ ರೀತಿಯಲ್ಲಿ ಹುದುಗಿರುವ ಜಾನಪದ ಸಾಹಿತ್ಯವನ್ನು ಹೆಕ್ಕಿ ತೆಗೆದು ಸಂಗ್ರಹಿಸಿದರೆ ಅದನ್ನು ಭವಿಷ್ಯದ ಪೀಳಿಗೆಯವರೆಗೂ ತಲುಪಿಸಲು ಸಾಧ್ಯವಾಗಲಿದೆ. ಜಾನಪದ ಎಂಬುದು ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಯ ಮೂಲವೇ ಆಗಿದೆ, ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧ ಇದ್ದು, ನಡೆ-ನುಡಿಯಲ್ಲಿ, ಆಹಾರ, ವೇಷಭೂಷಣ, ಕೃಷಿ, ಕಲೆ ಇವೆಲ್ಲವೂ ಜನಪದದ ಭಾಗಗಳಾಗಿವೆ
ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಡಿ. ರಾಮನಮಲಿ ಮಾತನಾಡಿ, ಹೊಟ್ಟೆಯ ಹಸಿವಿಗಿಂತ ನೆತ್ತಿಯ ಹಸಿವುಮುಖ್ಯವಾಗಿದ್ದು ಕಲಿಯದವರು ಕಲಿತವರಿಗೆ ಕಲಿಸುವುದೇ ಜಾನಪದ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಕೆ.ಎಂ. ಹುಚ್ಚರಾಯಪ್ಪ, ಡಾ. ಕೆ.ಬುಳ್ಳಪ್ಪ, ಕೆ. ಶಂಭುಲಿಂಗಪ್ಪ, ಪುನೀತರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಹೆಚ್. ಕೊಟ್ರೇಶ, ಕನ್ನಡ ಸಾಹಿತ್ಯ ಪರಿಷತ್ತು ಅರಸಿಕೇರಿ ಹೋಬಳಿ ಘಟಕದ ಅಧ್ಯಕ್ಷ ಡಾ. ಎಂ. ಸುರೇಶ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಗೌರವ ಕಾರ್ಯದರ್ಶಿ ಜಿ. ಮಹಾದೇವಪ್ಪ, ಕಾರ್ಯಕಾರಿ ಮಂಡಳಿ ಸದಸ್ಯ ಬಿ.ಎಂ. ನಾಗರಾಜ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.