ದಾವಣಗೆರೆ, ಡಿ. 4- ತಾಲ್ಲೂಕಿನ ಐಗೂರು ಗೊಲ್ಲರಹಟ್ಟಿ ಸಮೀಪ ಯುವಕರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನಾಭರಣ ದೋಚಿದ್ದ ಆರೋಪಿ ಗಳನ್ನು ಹೊಯ್ಸಳ ಗಸ್ತು ವಾಹನದ ಪೊಲೀಸರು ಬಂಧಿಸಿ 1ಬಳ್ಳಿ ಉಂಗುರ, 2 ಸಾವಿರ ನಗದು, ಮೊಬೈಲ್ ಫೋನ್ ವಶಪಡಿಕೊಳ್ಳು ವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ತರುಣ್, ಸಿಕಂದರ್, ಐಗೂರು ಗ್ರಾಮದ ಪ್ರಶಾಂತ್ ಬಂಧಿತ ಆರೋ ಪಿಗಳು. ತಾಲೂಕಿನ ಕಾಟೀಹಳ್ಳಿಯ ದಾದಾಪೀರ್ ಹಾಗೂ ಅಹಮ್ಮದ್ ಎಂಬುವರು ನ.27 ರಂದು ರಾತ್ರಿ ದಾವಣಗೆರೆಯಲ್ಲಿ ಕೆಲಸ ಮುಗಿಸಿ ಊರಿಗೆ ಮರಳುತ್ತಿದ್ದರು. ಐಗೂರು ಸಮೀಪದ ಡಾಬಾದಲ್ಲಿ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದರು.
ಈ ವೇಳೆ ಯುವಕರನ್ನು ಬೆದರಿಸಿದ ಆರೋಪಿಗಳು ನಗದು, ಚಿನ್ನಾಭರಣ ಸುಲಿಗೆ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳೀಯರು, ಪೊಲೀಸ್ ತುರ್ತು ಸಹಾಯವಾಣಿ 112 ಗೆ ಈ ಕುರಿತ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ‘ಹೊಯ್ಸಳ’ ಗಸ್ತು ವಾಹನದ ಸಿಬ್ಬಂದಿ ಸುಲಿಗೆಕೋರರು ಹಾಗೂ ಅವರು ತೆರಳಿದ ಮಾರ್ಗದ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿಗಳನ್ನು 8 ಕಿ.ಮೀ. ಬೆನ್ನಟ್ಟಿದ ಪೊಲೀಸರು, ಆರ್‌ಎಂಸಿ ಠಾಣಾ ವ್ಯಾಪ್ತಿಯ ಗಾಣಗಟ್ಟೆ ಮಾಯಮ್ಮ ದೇಗುಲದ ಬಳಿ ಬಂಧಿಸಿದ್ದಾರೆ. ಬಳಿಕ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.