ಮಲೇಬೆನ್ನೂರು, ಡಿ. 3- ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆ ಕಂಡು ಬಂದಿದ್ದು ಪ್ರಾಥಮಿಕ ಶಾಲಾ ಶಿಕ್ಷಕರು ಈ ಕೊರತೆ ನೀಗಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ಸೂಚನೆ ನೀಡಿದರು.
ಮಿಟ್ಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೆಂಗಳೂರಿನ ಇಂಡಿಯಾ ಸುಧಾರ್ ಮತ್ತು ಪವರ್ ಸ್ಕೂಲ್ ಸಂಸ್ಥೆಗಳಿಂದ ನಿರ್ಮಿಸಿದ ನೂತನ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಗುಣಮಟ್ಟದಲ್ಲಿ ದೊರೆತರೆ ಮಕ್ಕಳಿಗೆ ಉತ್ತಮ ಅಡಿಪಾಯ ದೊರೆಯುತ್ತದೆ. ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೇಗೆ ಪಾಸಾಗಲು ಸಾಧ್ಯವೆಂದು ಪ್ರಶ್ನಿಸಿದ ಅವರು, ಶಿಕ್ಷಕರು ಪ್ರಾಮಾಣಿಕವಾಗಿ ಬೋಧನೆ ಮಾಡಬೇಕೆಂದರು.
ಪ್ರೌಢಶಾಲಾ ವಿದ್ಯಾರ್ಥಿನಿಯರು ಗಣನೀಯ ಸಂಖ್ಯೆಯಲ್ಲಿ ಮಾಸಿಕ ಕಿರು ಪರೀಕ್ಷೆಗೆ ಗೈರಾಗುತ್ತಿದ್ದಾರೆ. ಅವರಲ್ಲಿ ಹಲವರು ಬಾಲ್ಯವಿವಾಹ ಆಗುತ್ತಿರುವ ಮಾಹಿತಿ ಇದೆ. ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಪೋಷಕರು ಎಚ್ಚರಿಕೆ ವಹಿಸಬೇಕು.
ಮಕ್ಕಳ ಗ್ರಾಮಸಭೆ ನಡೆಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಬಿಸಿಯೂಟ ಯೋಜನೆ ಇದ್ದರೂ ಹಲವು ವಿದ್ಯಾರ್ಥಿಗಳಲ್ಲಿ ರಕ್ತಹೀನತೆ, ಚರ್ಮ ಕಾಯಿಲೆ, ಅನಿಮಿಯಾ ಕಂಡುಬಂದಿದೆ. ಈ ಕುರಿತು ಸಂಬಂಧಿತರು ಗಮನ ಹರಿಸಬೇಕಾಗಿದೆ ಎಂದರು.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ 110 ಶೌಚಾಲಯಗಳು ನಿರ್ಮಾಣಗೊಂಡಿದ್ದು 240 ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ. ಶಾಲೆಗಳಿಗೆ ಶಾಲಾ ಮೈದಾನ, ಶೌಚಾಲಯ ಇತರೆ ಮೂಲ ಸೌಕರ್ಯ ಒದಗಿಸಲು ಸಂಬಂಧಿತರು ಆದ್ಯತೆ ನೀಡಬೇಕೆಂದರು.
ರಾಜ್ಯದಲ್ಲಿರುವ ಕಂಪನಿಗಳಿಂದ ವಾರ್ಷಿಕ ಒಟ್ಟು ಮೂರು ಸಾವಿರ ಕೋಟಿ ರೂ. ಸಾಮಾಜಿಕ ಹೊಣೆಗಾರಿಕೆಯ ನಿಧಿ (ಸಿಎಸ್‍ಆರ್ ಫಂಡ್)ಸೃಜಿಸುತ್ತದೆ. ಈ ಅನುದಾನ ಬಳಕೆ ಮಾಡಿದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮುಖ್ಯವಾಹಿನಿಗೆ ಬರಲು ಸಾಧ್ಯ. ನಮ್ಮ ಸಂಸ್ಥೆಯಿಂದ ಗ್ರಾಮೀಣ ಶಾಲೆಗಳಿಗೆ ಶೌಚಾಲಯ, ಆಟಿಕೆ, ಕ್ರೀಡಾ ಸಾಮಗ್ರಿ, ಶಿಕ್ಷಕರಿಗೆ ತರಬೇತಿ ನೀಡಲು ಯೋಜಿಸಿದ್ದೇವೆ ಎಂದು ಪವರ್ ಸ್ಕೂಲ್ ಸಂಸ್ಥೆ ಮುಖ್ಯಸ್ಥ ಪ್ರಕಾಶಂ ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ತಾಲ್ಲೂಕಿನಲ್ಲಿ ರೂ.2 ಕೋಟಿಗಿಂತ ಹೆಚ್ಚಿನ ಸಿಎಸ್‍ಆರ್ ಫಂಡ್ ಶಾಲೆಗಳಿಗೆ ವಿನಿಯೋಗಿಸಲಾಗಿದ್ದು, 40 ಸಾವಿರ ಮಕ್ಕಳು ಸೌಲಭ್ಯಗಳನ್ನು ಪಡೆದಿರುತ್ತಾರೆ. ಈ ದಿಶೆ ಯಲ್ಲಿ ಶಿಕ್ಷಕ ಶರಣಕುಮಾರ್ ಹೆಗಡೆ ಮತ್ತು ತಂಡ ದವರ ಕಾರ್ಯ ಶ್ಲ್ಯಾಘನೀಯ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಡಿ.ದುರುಗಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನರೇಗಾ ಯೋಜನೆಯಲ್ಲಿ ಈ ಶಾಲಾ ಮೈದಾನವನ್ನು ಸಮತಟ್ಟ ಮಾಡಿ, ಮೂಲಭೂತ ಸೌಕರ್ಯ ಒದಗಿಸಿಕೊಡಲಾಗುವುದು ಎಂದು ಗ್ರಾಪಂ ಅಧ್ಯಕ್ಷರಾದ ಲತಾ ಹೇಳಿದರು.
ಇಂಡಿಯಾ ಸುಧಾರ್ ಸಂಸ್ಥೆಯ ಕಿರಣ್, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಹೆಗಡೆ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಖಚಾಂಚಿ ಗಿರೀಶ್, ವಿವಿಧ ಸಂಘಟನೆಗಳ ಶಿಕ್ಷಕರಾದ ಸತೀಶ್, ಪಿ.ರಾಮಕೃಷ್ಣಪ್ಪ, ಮಲ್ಲಿಕಾರ್ಜುನ್, ಮಂಜಪ್ಪ ಬಿದರಿ, ಆನಂದ್, ಕೆ.ಭೀಮಪ್ಪ, ಹನುಮಂತ ನಾಯ್ಕ್, ಮುಖಂಡರಾದ ಚಂದ್ರಪ್ಪ, ಮನೋಹರ್, ವಿವಿಧ ಕಂಪನಿಗಳ ಅಧಿಕಾರಿಗಳಾದ ವಿನೋದ್ ಮುರುಗೋಡ್, ಸೌಂದರ್ಯ ರಾಜನ್, ಗ್ರಾಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ, ಚನ್ನಬಸಪ್ಪ, ಪಿಡಿಓ ರವಿ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.