ದಾವಣಗೆರೆ, ಡಿ. 3 – ತಾಲ್ಲೂಕಿನ ಗುಡಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೊಸಳ್ಳಿ ಗ್ರಾಮದ ಜನರ ಅನುಕೂಲಕ್ಕಾಗಿ ಹೊಸಳ್ಳಿ ಗ್ರಾಮದ ಜನರಿಗೆ ಆಶ್ರಯ ಯೋಜನೆಯಲ್ಲಿ ಕಾಯ್ದಿರಿಸಿದ ಜಾಗದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ದಾವಣಗೆರೆ ವತಿಯಿಂದ 2012-13ನೇ ಸಾಲಿನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಗೊಂಡಿರುತ್ತದೆ.
ಈ ಓವರ್ ಹೆಡ್ ಟ್ಯಾಂಕ್‌ಗೆ ಸುಮಾರು ಒಂದು ಕಿ.ಮೀ. ದೂರದಿಂದ ಬೋರ್‌ವೆಲ್ ಮೂಲಕ ಟ್ಯಾಂಕ್ ತುಂಬಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ಅದಕ್ಕಾಗಿ ಸರ್ಕಾರ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿ ಟ್ಯಾಂಕ್ ನಿರ್ಮಿಸಿದೆ.
ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಟ್ಯಾಂಕ್ ತುಂಬಿಸಿ, ಗ್ರಾಮಕ್ಕೆ ನೀರು ಬಿಡುತ್ತಿಲ್ಲ. ನೀರು ಬಿಡುವ ನೌಕರ ಬೋರ್‌ವೆಲ್‌ನಿಂದ ನೇರವಾಗಿ ಗ್ರಾಮಕ್ಕೆ ನೀರು ಬಿಡುವ ಪದ್ಧತಿ ಮಾಡಿಕೊಂಡಿರುತ್ತಾರೆ.
ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಟ್ಯಾಂಕ್‌ನಿಂದ ಏನೂ ಪ್ರಯೋಜನವಾಗುತ್ತಿಲ್ಲ.
ವಿದ್ಯುತ್ ನಷ್ಟ, ಪದೇ ಪದೇ ಮೋಟರ್ ಸುಟ್ಟುಹೋಗುವುದು ಮತ್ತು ಇತ್ಯಾದಿ ಸಮಸ್ಯೆಗಳು ಪದೇ ಪದೇ ಬರುತ್ತಲೇ ಇರುತ್ತವೆ.
ಈ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಸುಮಾರು 90 ಮನೆಗಳಿಗೆ ನೀರಿನ ನಳ ಅಳವಡಿಸಲಾಗಿದೆ. ಆದರೆ ಯಾವ ಮನೆಗೂ ನೀರು ಬರುವುದಿಲ್ಲ. ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆಯಾದರೂ ಎಲ್ಲಾ ಕಳಪೆ ಕಾಮಗಾರಿ ಆಗಿದೆ ಎಂದು ಗ್ರಾಮದ ಜನರು ಬೇಸರ ವ್ಯಕ್ತಪಡಿಸಿರುತ್ತಾರೆ.
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ