ಮಲೇಬೆನ್ನೂರು, ಡಿ.3- ನವದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಬಣದವರು ಮಂಗಳವಾರ ಸಂಸದೀಯ ಜಂಟಿ ಸದನ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕ ಪಾಲ್ ಅವರನ್ನು ಭೇಟಿ ಮಾಡಿ ವಕ್ಫ್ ಕಾಯ್ದೆ ರದ್ದುಪಡಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ವಿಷಯವನ್ನು `ಜನತಾವಾಣಿ’ಗೆ ತಿಳಿಸಿದ ಹರಿಹರ ಶಾಸಕ ಬಿ.ಪಿ. ಹರೀಶ್ ಅವರು, ವಕ್ಫ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ಗೊಂದಲಗಳ ಬಗ್ಗೆ ಸಂಸದೀಯ ಜಂಟಿ ಸದನ ಸಮಿತಿಯ ಅಧ್ಯಕ್ಷರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿ, ಕಾಯ್ದೆ ರದ್ದು ಮಾಡುವಂತೆ ಮನವಿ ಮಾಡಿದ್ದೇವೆ ಎಂದರು. ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಭಗವಂತ ನಾಯಕ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಭಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಭಗವಂತ ನಾಯಕ, ಸಂತೋಷ್, ಜಿ.ಎಸ್. ಅನಿತ್ ಮತ್ತಿತರರು ಈ ನಿಯೋಗದಲ್ಲಿದ್ದರೆಂದು ಹರೀಶ್ ತಿಳಿಸಿದರು.