ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ
ಹೊನ್ನಾಳಿ, ಡಿ.3- ಬರುವ ಮಾರ್ಚ್ ತಿಂಗಳಲ್ಲಿ ನಡೆಯುವ ಲಿಂ.ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳನ್ನೊಳಗೊಂಡ ಪಂಚ ರಾಜ್ಯಗಳ ಕೃಷಿ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹಿರೇಕಲ್ಮಠದಲ್ಲಿ ಭಾನುವಾರ ರಾತ್ರಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕೋವಿಡ್‌ಗಿಂತ ಮುಂಚೆ ಶ್ರೀಮಠದಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿತ್ತು. ಈಗ ಅದೇ ಮಾದರಿಯ ಹಾಗೂ ಅನ್ನದಾತ ರೈತನ ಹಿತಕ್ಕಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಪಂಚ ರಾಜ್ಯಗಳ ಕೃಷಿ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಶ್ರೀಮಠದ ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ವತಿಯಿಂದ ಎಲ್‍ಕೆಜಿಯಿಂದ ಪದವಿ ಹಾಗೂ ಬಿ.ಇಡಿ. ಪದವಿಗಳವರೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾಲೇಜು ತರುವ ಎಲ್ಲಾ ಪ್ರಯತ್ನಗಳು ನಡೆದಿವೆ ಇದಕ್ಕಾಗಿ ಇಲಾಖೆಯಿಂದ ಒಂದು ಸುತ್ತಿನ ಪರಿವೀಕ್ಷಣೆ ನಡೆದಿದೆ ಎಂದರು.
ಶಿವಮೊಗ್ಗ ಕೃಷಿ ವಿಶ್ವ ವಿದ್ಯಾನಿಲಯದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿ, ಕೃಷಿ ವಿ.ವಿದ್ಯಾನಿಲಯದ ಕುಲಪತಿ ಆರ್.ಸಿ.ಜಗದೀಶ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ವೀರಶೈವ ಮಠಗಳು ಅನ್ನ ದಾಸೋಹದೊಂದಿಗೆ ಅಕ್ಷರ ದಾಸೋಹ ನೀಡಿದ ಪ್ರಯುಕ್ತ ಇಂದು ಸುಭಿಕ್ಷ ರಾಜ್ಯವಾಗಿದೆ. ಮಠಗಳಲ್ಲಿ 80 ಸಾವಿರಕ್ಕೂ ಹೆಚ್ಚು ಬಡ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ, ಸಿದ್ದಗಂಗಾ ಮಠವೊಂದರಲ್ಲಿಯೇ 20 ಸಾವಿರಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೊಂದು ಅದ್ಭುತ ಸಾಧನೆ ಎಂದು ಬಣ್ಣಿಸಿದರು.
ಶಿವಮೊಗ್ಗ ಕೃಷಿ ವಿ.ವಿ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿ, ಕೃಷಿ ವಿ.ವಿ. ಕುಲಸಚಿವ ಕೆ.ಸಿ.ಶಶಿಧರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಭೂಷಿತ ಕೆಎಂಎಫ್ ನಿರ್ದೇಶಕ ಬಿ.ಜಿ.ಬಸವರಾಜಪ್ಪ, ಪ್ರಗತಿಪರ ರೈತ ಮಹಿಳೆ ಕೆ.ಎಚ್.ಉಮಾಶೇಖರಪ್ಪ ಮತ್ತು ರೈತ ಮುಖಂಡ ಎಚ್.ಕೆ.ರಮೇಶ್ ಅವರುಗಳಿಗೆ ಗುರು ರಕ್ಷೆ ನೀಡಲಾಯಿತು.
ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ ಸ್ವಾಗತಿಸಿದರು. ನಿರ್ದೇಶಕ ಚನ್ನಬಸಯ್ಯ ನಿರೂಪಿಸಿದರು. ಶ್ರೀ ಅಭಿನೇತ್ರಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕವನ, ಕೆ.ತಿಮ್ಮಪ್ಪ, ಸುನಂದ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.