ದಾವಣಗೆರೆ, ಡಿ. 3- ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಹೊಂದಿದ ಪತ್ರ ಬರಹಗಾರರ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಈ ಒಕ್ಕೂಟದ ರಾಜ್ಯಧ್ಯಕ್ಷರಾಗಿ ನಗರದ ಹಿರಿಯ ಪತ್ರ ಬರಹಗಾರ ಡಿ.ಕೆ. ಸಂಗಮೇಶ್ ಎಲಿಗಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೃತ್ತಿಪರ ಪತ್ರ ಬರಹಗಾರರ ಅಸೋಸಿಯೇಷನ್ ವತಿಯಿಂದ ಸ್ಥಳೀಯ ಶ್ರೀ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ನಿನ್ನೆ ನಡೆದ ರಾಜ್ಯದ ಎಲ್ಲಾ ಪತ್ರ ಬರಹಗಾರರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳ ಪತ್ರ ಬರಹಗಾರರ ಕುಂದು-ಕೊರತೆಗಳ ಬಗ್ಗೆ ಸುದೀರ್ಘ ಚರ್ಚೆ ಸಭೆಯಲ್ಲಿ ನಡೆದು, ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪತ್ರ ಬರಹಗಾರರ ಒಕ್ಕೂಟವನ್ನು ರಾಜ್ಯ ಮಟ್ಟದಲ್ಲಿ ರಚಿಸಲು ತೀರ್ಮಾನ ಕೈಗೊಳ್ಳಲಾಯಿತು.
ವೃತ್ತಿಪರ ಪತ್ರ ಬರಗಾರರ ಅಸೋಸಿಯೇಷನ್‌ನ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಡಿ.ಕೆ. ಸಂಗಮೇಶ್ ಎಲಿಗಾರ್ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.