ದೇಶದ ಉನ್ನತಿಗಾಗಿ ಪಡೆದ ಜ್ಞಾನ ಬಳಕೆಯಾಗಲಿ

ದೇಶದ ಉನ್ನತಿಗಾಗಿ ಪಡೆದ ಜ್ಞಾನ ಬಳಕೆಯಾಗಲಿ

ಹರಿಹರ ಶಾಸಕ ಬಿ.ಪಿ. ಹರೀಶ್‌ ಆಶಯ

ಹರಿಹರ, ಡಿ. 1 – ಕಾಲೇಜಿನಲ್ಲಿ ಪಡೆದ ಶಿಕ್ಷಣ ಅಂಕ ಗಳಿಕೆಗಷ್ಟೇ ಸಿಮೀತವಾಗದೆ, ದೇಶದ ಉನ್ನತಿಗೆ, ಅಭಿವೃದ್ಧಿಗೆ ಬಳಕೆಯಾಗಲಿ. ಆ ಮೂಲಕ ಉತ್ತಮ ಪ್ರಜೆಗಳಾಗಿ ಬೆಳೆಯಿರಿ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಬಿ.ಪಿ. ಹರೀಶ್ ಅವರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸ್ಕೌಟ್ ಮತ್ತು ಗೈಡ್ ಹಾಗೂ ರೆಡ್‍ಕ್ರಾಸ್ ಚಟುವಟಿಕೆಗಳ ಉದ್ಘಾಟನೆ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಹರಿಹರ ದೀವಿಗೆ-4 ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಸರ್ಕಾರಿ ಕಾಲೇಜುಗಳು ಇಂದು ಖಾಸಗಿ ಕಾಲೇಜುಗಳನ್ನು ಮೀರಿ ಬೆಳೆಯುತ್ತಿವೆ. ಅದರಲ್ಲೂ ಶೈಕ್ಷಣಿಕ ಸಾಧನೆಯಲ್ಲಿ ಸಾಕಷ್ಟು ಉತ್ತಮ ಫಲವನ್ನು ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಆದ್ಯತೆಯ ಮೇಲೆ ನೀಡಬೇಕೆಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಾತಿ ಬಸವರಾಜ್ ಅವರು, ಸಮಾಜದಲ್ಲಿ ಕಸ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಇದು ವಿನಾಶದ ಲಕ್ಷಣವಾಗಿದೆ. ಈ ಬಗ್ಗೆ ಎಚ್ಚರ ವಹಿಸಬೇಕಾ ಗಿದೆ. ಕನ್ನಡ ಶ್ರಮ-ಸಂಸ್ಕೃತಿಯನ್ನು ಉತ್ತೇಜಿಸುವ ಭಾಷೆಯಾಗಿದೆ. ಕನ್ನಡ ಜೊಳ್ಳಿ ಭಾಷೆಯಲ್ಲ, ಇದು ಸೊಬಗಿನ ಭಾಷೆ. ಕೆರೆಗೆ ಹಾರವಾದ ಭಾಗೀರತಿಯಂತಹ ಉದಾತ್ತ ಮನೋಭಾವದ ಸಂಸ್ಕೃತಿಯ ಭಾಷೆ ಕನ್ನಡವಾಗಿದೆ ಎಂದು ಕನ್ನಡದ ಮತ್ತು ನಾಡಿನ ಹಿರಿಮೆಯನ್ನು ಶ್ಲ್ಯಾಘಿಸಿದರು.

ದ್ರಾವಿಡರು ಹುಟ್ಟಿದ ದಿನದಿಂದಲೇ ಕನ್ನಡ ಹುಟ್ಟಿಕೊಂಡಿದೆ. ಭಾಷೆಗೆ ಮಿತಿ ಇಲ್ಲ, ಆದರೆ ಕನ್ನಡ ಲಿಪಿಯ ಹುಟ್ಟಿನ ಕಾಲದಿಂದ ಕನ್ನಡ ಭಾಷಾ ಇತಿಹಾಸವನ್ನು ಗುರುತಿಸಲಾ ಗುತ್ತಿದೆ. ಇಂಗ್ಲಿಷ್ ಎಂಬ ವ್ಯಾಮೋಹದ ಭಾಷೆಯು ಕನ್ನಡ ಭಾಷಾ ಬೆಳವಣಿಗೆಗೆ ಸಹಕಾರಿ. ಅನ್ಯ ಭಾಷೆಯ ಪದಗಳನ್ನು ಎರವಲು ಪಡೆಯುವ ಮೂಲಕ ಭಾಷೆಗೆ ಇನ್ನು ಚಂದದ ಹೊಳಪನ್ನು ನೀಡಬಹುದಾಗಿದೆ ಎಂದು ಕನ್ನಡ ಭಾಷೆಯ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್. ವಿರುಪಾಕ್ಷಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧೀಕ್ಷಕ ಆರ್.ಎಂ.ವೀರಭದ್ರಯ್ಯ, ಐ.ಕ್ಯೂ.ಎಸ್.ಸಿ. ಸಂಯೋಜಕ ಡಾ. ಹೆಚ್.ಪಿ. ಅನಂತನಾಗ್, ಸಾಂಸ್ಕೃತಿಕ ವಿಭಾಗದ ಸಂಚಾಲಕ  ಡಾ. ಎಂ. ಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ. ಎಸ್. ಗಂಗರಾಜು, ಕೆ.ಜೆ. ಯೋಗೀಶ್,  ಯುವ ರೆಡ್ ಕ್ರಾಸ್‍ನ ಸಂಚಾಲಕ ಡಾ. ಬಿ.ಕೆ. ಮಂಜುನಾಥ, ರೇಂಜರ್ಸ್ ಲೀಡರ್‍ಗಳಾದ ಡಾ. ಜಿ.ಎನ್. ದಾಕ್ಷಾಯಿಣಿ, ಡಾ. ಎಂ.ಎಸ್. ಗೌರಮ್ಮ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಚಂದ್ರಶೇಖರ ಹಾಗೂ ಐ.ಕ್ಯೂ.ಎ.ಸಿ. ಸಹ ಸಂಯೋಜಕ ಅಬ್ದುಲ್ ಬಶೀರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾರ್ಥಿನಿ ಕು. ಎನ್.ಹೆಚ್. ಅರ್ಪಿತಾ ಪ್ರಾರ್ಥಿಸಿದರು. ಕು. ಅನಿತಾ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ  ಪಡಿಸಿದರು. ಸಮಾಜ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಕನ್ನಡ ವಿಭಾಗದ ಅಧ್ಯಾಪಕ ಡಾ. ಎಸ್.ಆರ್. ಮಹಾಂತೇಶ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿನಿ ಕು. ದೀಕ್ಷಿತಾ ಮತ್ತು ಕು. ನಾಗವೇಣಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಬಿ.ಎಸ್ಸಿ ವಿದ್ಯಾರ್ಥಿನಿ ಕು. ಎಲ್.ಆರ್. ಸಹನ ವಂದಿಸಿದರು.

error: Content is protected !!