ಮಲೇಬೆನ್ನೂರು, ಡಿ. 1 – ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ನೋ ಸ್ಕಾಲ್ ಪೆಲ್ ವ್ಯಾಸಕ್ಟಮಿ ಕುರಿತು ಜಾಗೃತಿ ಮೂಡಿಸುವ ಸೇವಾ ಸಪ್ತಾಹ ಕಾರ್ಯಕ್ರಮವನ್ನು ಟಿಹೆಚ್ಒ ಡಾ. ಅಬ್ದುಲ್ ಖಾದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವ್ಯಾಸಕ್ಟಮಿ ಎಂದರೆ ಪುರುಷರಿಗೆ ನಡೆಸುವ ಶಸ್ತ್ರ ಚಿಕಿತ್ಸೆ ಇದಾಗಿದ್ದು ಇದು ಶಾಶ್ವತ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಆಗಿದೆ. ಮಾಮೂಲಿನ ಶಸ್ತ್ರ ಚಿಕಿತ್ಸೆ ತರ ಯಾವುದೇ ಗಾಯ ಅಥವಾ ಹೊಲಿಗೆ ಹಾಕುವ ಪ್ರಮೇಯ ಇರುವುದಿಲ್ಲ. ಈ ಶಸ್ತ್ರ ಚಿಕಿತ್ಸೆಯಾದ ನಂತರ ನಡೆದುಕೊಂಡೇ ಮನೆಗೆ ಹೋಗಬಹುದು. ಯಾವುದೇ ತೊಂದರೆ ಇರುವುದಿಲ್ಲ. ಈ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ ನಂತರ 1100 ರೂಪಾಯಿಗಳ ಪ್ರೋತ್ಸಾಹ ದನವನ್ನು ನೀಡಲಾಗುವುದು ಎಂದು ಡಾ ಖಾದರ್ ತಿಳಿಸಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಚೇತನ್ ಮಾತನಾಡಿ, ನವಂಬರ್ 21ರಿಂದ ನವೆಂಬರ್ 27 ರವರೆಗೆ ಅರಿವು ಮೂಡಿಸುವುದು ಮತ್ತು ಪ್ರೇರೇಪಿಸುವ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದರು.
ನವಂಬರ್ 28 ರಿಂದ ಡಿಸೆಂಬರ್ 4ರ ವರೆಗೆ ಸೇವಾ ಸಪ್ತಾಹ ಇರುತ್ತದೆ. ಜನಸಂಖ್ಯಾ ನಿಯಂತ್ರಣಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದರು. ತಾ ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿ ಎಂ ಉಮ್ಮಣ್ಣ ಅವರು, ಜನರು ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. `ಇಂದಿನಿಂದಲೇ ನಿರ್ಧರಿಸೋಣ ಕುಟುಂಬ ಯೋಜನೆ ಬಗ್ಗೆ ದಂಪತಿಗಳು ಕೂಡಿ ಚರ್ಚಿಸೋಣ’ ಎಂಬ ಸಂದೇಶದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಔಷಧಿ ದಾಸ್ತಾನುಗಾರರಾದ ಲತಾ, ಪ್ರಯೋಗಶಾಲಾ ತಂತ್ರಜ್ಞ ದೇವರಾಜ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರಕಾಶ್ ನಾಯಕ್, ತಿಪ್ಪೇಸ್ವಾಮಿ, ಆರೋಗ್ಯ ಸುರಕ್ಷಣಾಧಿಕಾರಿಗಳಾದ ಆಶಾರಾಣಿ, ಸವಿತಾ, ಆಶಾ ಕಾರ್ಯಕರ್ತೆ ಮಾಲಾಶ್ರೀ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.