ದಾವಣಗೆರೆ, ಡಿ. 1- ನಗರದ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಂವಿಧಾನ ದಿನದ ಅಂಗವಾಗಿ ಮಕ್ಕಳಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಗೌರವಾನ್ವಿತ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಜಿ.ಸಿ. ಪ್ರಶಾಂತ್ ಮಕ್ಕಳನ್ನುದ್ದೇಶಿಸಿ ಕಾನೂನು ಸಲಹೆ ನೀಡುತ್ತಾ, ಇಂದು ಹೆಚ್ಚುತ್ತಿರುವ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಿದರು.
ಸಲಹೆಗಾರರಾಗಿ ಆಗಮಿಸಿದ್ದ ಶ್ರೀಮತಿ ಮಹಾದೇವಿ ಹಿರೇಮಠ ಅವರು ಮಾತನಾಡಿ, ಮಕ್ಕಳಿಗೆ ಕಾನೂನು ನಿಮ್ಮ ತಾಯಿಯ ಗರ್ಭದಿಂದ ಸಾಯುವವರೆಗೂ ಇರುತ್ತದೆ ಎಂದು ಹೇಳುತ್ತಾ ಇಂದು ಹೆಚ್ಚುತ್ತಿರುವ ಬಾಲಾಪರಾಧಗಳ ಬಗ್ಗೆ ತಿಳುವಳಿಕೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಪ್ರತಿಭಾ ಮಾತನಾಡಿ, ಮಕ್ಕಳಿಗೆ ಯಾರಿಂದಲಾ ದರೂ ತೊಂದರೆಗಳುಂಟಾದಲ್ಲಿ ತಕ್ಷಣ ನಮ್ಮ ಕಛೇರಿಗೆ ಬಂದು ಮಾಹಿತಿ ನೀಡಲು ತಿಳಿಸಿದರಲ್ಲದೆ ಬಾಲ್ಯ ವಿವಾಹ ನಿಷೇಧದ ಬಗ್ಗೆಯೂ ಮಾಹಿತಿಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಸಯ್ಯದ್ ಆರಿಫ್ ಆರ್. ಮಾತನಾಡಿ, ಭಾರತದ ನ್ಯಾಯಾಂಗ ವ್ಯವಸ್ಥೆಯ ಮಹತ್ವ ಮತ್ತು ಪಾರದರ್ಶಕತೆಯನ್ನು ಕುರಿತು ತಿಳಿಸುತ್ತಾ ಕಾನೂನೇ ನಮ್ಮ ಉಸಿರು ಎಂದು ಕಾನೂನಿನ ಮಹತ್ವವನ್ನು ತಿಳಿಸಿದರು.
ಕ್ಷೇತ್ರ ಸಂಪನ್ಮೂಲಾಧಿಕಾರಿ ರಮೇಶ್, ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್ಕುಮಾರ್, ಕಾರ್ಯದರ್ಶಿ ಉಮಾಪತಯ್ಯ ಹಾಗೂ ಖಜಾಂಚಿ ಪ್ರವೀಣ್ ಹುಲ್ಲುಮನೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಸಯ್ಯದ್ ಆರ್. ಆರಿಫ್, ಮತ್ತು ಶ್ರೀಮತಿ ಪ್ರೀತಾ ಟಿ. ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಎಸ್.ಎಂ. ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.