ಹುಬ್ಬಳ್ಳಿ, ಡಿ.1- ಮನುಷ್ಯರ ಶವ ಸಂಸ್ಕಾರದಂತೆಯೇ ಪ್ರಾಣಿಗಳ ಅಂತ್ಯಕ್ರಿಯೆ ನಡೆಸಲು ರಾಜ್ಯದಲ್ಲಿಯೇ ಪ್ರಥಮವಾಗಿ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಪ್ರಾಣಿಗಳ ಅಂತ್ಯಕ್ರಿಯಾ ಘಟಕಗಳನ್ನು ಸ್ಥಾಪಿಸಿದೆ.
ಪ್ರಾಯೋಗಿಕ ಹಂತ ಮಾತ್ರ ಬಾಕಿ ಉಳಿದುಕೊಂಡಿದೆ. ಮುಂದಿನ ದಿನಗಳಲ್ಲಿ ಸತ್ತ ಪ್ರಾಣಿಗಳ ದಹನವೂ (ಸುಡುವುದು) ಆಗಲಿದೆ. ಇದಕ್ಕಾಗಿ ಹು-ಧಾ ಮಹಾನಗರಪಾಲಿಕೆ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಎರಡು ಘಟಕಗಳ ಕಾಮಗಾರಿ ಮುಗಿಸಿದೆ. ಒಟ್ಟು 1.6 ಕೋಟಿ ರೂ. ಖರ್ಚಾಗಿದೆ. 15ನೇ ಹಣಕಾಸು ಆಯೋಗದಡಿ ಅನುದಾನವನ್ನು ಮಹಾನಗರಪಾಲಿಕೆ ಬಿಡುಗಡೆಗೊಳಿಸಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಧಾರವಾಡ ಹೊಸಯಲ್ಲಾಪುರ ಬಳಿಯ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಪ್ರಾಣಿಗಳ ದಹನ ಘಟಕ ತೆರೆಯಲಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾಕು ಪ್ರಾಣಿಗಳನ್ನು ಹೂಳಲು ಅಥವಾ ಸುಡಲು ನಿಗದಿತ ಸ್ಥಳ ಇರಲಿಲ್ಲ. ಮೃತ ಪ್ರಾಣಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದರು. ಇದರಿಂದ ಕೊಳತೆ ವಾಸನೆಯಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದರು. ಸಾಕು ಪ್ರಾಣಿ ಮಾಲೀಕರಿಗೆ ಎರಡು ಆಯ್ಕೆಗಳಿದ್ದವು. ತಮ್ಮ ಸಾಕು ಪ್ರಾಣಿಗಳನ್ನು ತಮ್ಮ ಹಿತ್ತಲಿನಲ್ಲಿ ಹೂತು ಹಾಕುವುದು ಅಥವಾ ಪಾಲಿಕೆ ವಾಹನಗಳಿಗೆ ಹಸ್ತಾಂತರ ಮಾಡುತ್ತಿದ್ದರು. ಆದರೀಗ, ಸಾಕಷ್ಟು ಜನರು ಮಹಾನಗರಪಾಲಿಕೆ ನಿಯಂತ್ರಣಾ ಕೊಠಡಿಗೆ ಕರೆ ಮಾಡುತ್ತಿದ್ದು, ಸಾಕು ಪ್ರಾಣಿಗಳ ಸ್ಮಶಾನ ಘಟಕ ಸ್ಥಾಪಿಸಲು ಒತ್ತಾಯ ಕೇಳಿಬಂದಿದ್ದವು.
ದೂರುಗಳ ಆಧಾರದ ಮೇಲೆ ಕ್ಯಾಟ್ ವ್ಹೆಹಿಕಲ್ಗಳು ಸತ್ತ ಪ್ರಾಣಿಗಳನ್ನು ತ್ಯಾಜ್ಯ ಘಟಕಗಳಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಅದು ವೈಜ್ಞಾನಿಕವಾಗಿರಲಿಲ್ಲ. ಮಹಾನಗರಪಾಲಿಕೆ ವೈಜ್ಞಾನಿಕವಾಗಿ ಪ್ರಾಣಿಗಳನ್ನು ವಅಂತ್ಯಕ್ರಿಯೆ ಮಾಡುವುದರ ಜೊತೆಗೆ ಪ್ರಾಣಿಗಳೂ ಕೂಡ ಮನುಷ್ಯರಂತೆ ಎಂಬ ಭಾವನೆಯಿಂದ ಪ್ರಾಣಿಗಳ ದಹನ ಘಟಕ ಸ್ಥಾಪಿಸುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಆರ್. ವಿಜಯಕುಮಾರ್, ಪ್ರಾಣಿಗಳನ್ನು ಗೌರವಯುತ ವಾಗಿ ಅಂತ್ಯಸಂಸ್ಕಾರ ಮಾಡುವ ಉದ್ದೇಶದಿಂದ ಎರಡು ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರಾಣಿಗಳು ಸತ್ತ ಕೂಡಲೇ ಸಹಾಯವಾಣಿಗೆ ಕರೆ ಮಾಡಿದರೆ, ಪಾಲಿಕೆ ಸಿಬ್ಬಂದಿ ಸತ್ತ ಪ್ರಾಣಿಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡುತ್ತಾರೆ. ಸಾರ್ವಜನಿಕರು ಕೂಡ ತಾವೇ ಬಂದು ಅಂತ್ಯಕ್ರಿಯೆ ಮಾಡಬಹುದು ಎಂದು ಹೇಳಿದರು.
ಒಂದು ತಾಸಿಗೆ 80-100 ಕೆಜಿ ತೂಕದ ಪ್ರಾಣಿಗಳನ್ನು ಇದರಲ್ಲಿ ದಹನ ಮಾಡಬಹುದು. ದಹನ ಯಂತ್ರಕ್ಕೆ ಸಂಬಂಧಿಸಿದಂತೆ ಸಿವಿಲ್ ಕಾಮಗಾರಿ ಮುಗಿದಿದೆ. ಇನ್ನಷ್ಟು ತಾಂತ್ರಿಕ ಕಾಮಗಾರಿಗಳು ಬಾಕಿ ಉಳಿದಿವೆ. ಸದ್ಯಕ್ಕೆ ಸ್ಪಾರ್ಕ್ ಹಾಗೂ ಕೆಲ ಸಾಮಗ್ರಿಗಳ ಜೋಡಣೆ ಉಳಿದುಕೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. 30 ಮೀಟರ್ ಎತ್ತರದ ಚಿಮಣಿ ನಿರ್ಮಿಸಿದ್ದು, ಯಾವುದೇ ಮಾಲಿನ್ಯ ಉಂಟಾಗದಂತೆ ತಡೆಯಲಿದೆ ಎಂದರು.
ಈ ಹಿಂದಿನ ಅಂಕಿ-ಅಂಶಗಳ ಪ್ರಕಾರ ಪ್ರತಿ ತಿಂಗಳ 250-300 ದೂರುಗಳು ಸಹಾಯವಾಣಿಗೆ ಬರುತ್ತಿವೆ. ಸಣ್ಣ ಹೆಗ್ಗಣದಿಂದ ಹಿಡಿದು ದನಕರುಗಳವರೆಗೆ ದೂರುಗಳು ಬರುತ್ತವೆ.
ಯಥಾಪ್ರಕಾರ ದೂರುಗಳ ಆಧಾರದ ಮೇಲೆ ಸತ್ತ ಪ್ರಾಣಿಗಳನ್ನು ವಾಹನಗಳ ಮೂಲಕ ಸಾಗಿಸಿ ತ್ಯಾಜ್ಯ ಘಟಕಗಳಲ್ಲಿ ಹೂಳಲಾಗುತ್ತಿತ್ತು. ಈಗ ಎರಡು ಘಟಕಗಳು ಸಿದ್ದವಾಗಿದ್ದು, ಕಾರ್ಯಚರಣೆ ಹಂತಕ್ಕೆ ಬಂದಿದ್ದು ವೈಜ್ಞಾನಿಕವಾಗಿ ಅಂತ್ಯಕ್ರಿಯೆ ಮಾಡಲಾಗು ವುದು. ಸ್ಪಾರ್ಕ್ ಮತ್ತು ಪುಣೆಯಿಂದ ಬರುವ ಕೆಲ ಉಪಕರಣಗಳ ಜೋಡಣೆ ಮಾತ್ರ ಬಾಕಿ ಇದೆ.