ಹರಪನಹಳ್ಳಿ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮಗೌಡ ಪಾಟೀಲ್ ಅಭಿಮತ
ಹರಪನಹಳ್ಳಿ, ಡಿ. 1 – ಸಮಾಜದಲ್ಲಿ ಉದ್ಭವವಾಗಿರುವ ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಯನ್ನು ಹೋಗಲಾಡಿ ಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವಕೀಲರ ಸಂಘದ ಅಧ್ಯಕ್ಷ ರಾಮಗೌಡ ಪಾಟೀಲ್ ಹೇಳಿದರು.
ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ, ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಬಾಗಳಿ ಗ್ರಾಮದ ರಾಮನಗೌಡ್ರು ಹಾಲಮ್ಮ ಚನ್ನನಗೌಡ ಪ್ರೌಢ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದರು.
18 ವರ್ಷ ದೊಳಗಿನ ಮಕ್ಕಳು ಬಾಲ್ಯವನ್ನು ಹೊಂದಿರು ತ್ತಾರೆ, ನಂತರ ವಯಸ್ಕರಾಗುತ್ತಾರೆ. ಮನೆಯಲ್ಲಿ ವಿವಿಧ ಕಾರಣಗಳಿಂದ ಇಂತಹ ಬಾಲ್ಯ ವಿವಾಹಕ್ಕೆ ಪೋಷಕರು ಮುಂದಾಗುತ್ತಾರೆ. ಇದರ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು. ಬಾಲ್ಯದಲ್ಲಿ ಮದುವೆ ಮಾಡುವುದರಿಂದ ದೈಹಿಕ ವಾಗಿ ಮತ್ತು ಮಾನಸಿಕವಾಗಿ ಬೆಳವಣಿಗೆ ಆಗಿರುವುದಿಲ್ಲ.
ದೇಶದಲ್ಲಿ ಹಿಂದಿನಿಂದಲೂ ಅನೇಕ ಅನಿಷ್ಟ ಪದ್ದತಿಗಳಿದ್ದವು. ಅದರಲ್ಲಿ ಬಾಲ್ಯ ವಿವಾಹವು ಒಂದಾಗಿದೆ. ಈಗಲೂ ಇದು ಅಲ್ಲಿ, ಇಲ್ಲಿ ಕಂಡು ಬರುತ್ತಿದ್ದು ಸಾಮಾಜಿಕ ಅನಿಷ್ಟ ಪದ್ದತಿಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದರು.
ಪ್ಯಾನಲ್ ವಕೀಲ ಸಣ್ಣ ನಿಂಗನಗೌಡ ಮಾತನಾಡಿ, ಅನಿಷ್ಟ ಪದ್ದತಿಯಲ್ಲಿ ಒಂದಾದ ಬಾಲ್ಯ ವಿವಾಹ ಪದ್ದತಿಯನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಪ್ರತಿ ನಿತ್ಯ ಸಮಾಜದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಅರಿತು ಕೊಳ್ಳಬೇಕೆಂದರು.
ಪ್ಯಾನಲ್ ವಕೀಲ ಎಂ. ಮೃತ್ಯುಂಜಯ ಇವರು ಬಾಲ್ಯ ವಿವಾಹ ನಿಷೇಧ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಕೇಶವ ಮೂರ್ತಿ ಹೆಚ್.ಎಂ. ಶಿಶು ಸಂರಕ್ಷಣಾಧಿಕಾರಿ ಅಶೋಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಾಗಳಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ಸುರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಕೀಲ ಸಿ.ನಾಗರಾಜನಾಯ್ಕ, ಪಿ. ಕರಿಬಸಪ್ಪ, ಮೇಲ್ವಿಚಾರಕಿ ವಿಜಯಲಕ್ಷ್ಮಿ, ದೈಹಿಕ ಶಿಕ್ಷಕ ಲೋಕೇಶ, ಗ್ರಾ.ಪ. ಅಧ್ಯಕ್ಷೆ ರೇಣುಕಾ, ಕೊಟ್ರೇಶ್ ಸೇರಿದಂತೆ ಶಾಲೆಯ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.