ದಾವಣಗೆರೆ, ನ.29- ನಗರದ ವಿವಿಧ ಕೊಳೆಗೇರಿಗಳ ಬಾಡಿಗೆ ಮನೆಗಳಲ್ಲಿ ವಾಸವಿರುವ ಜನರಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಸಹಯೋಗದಲ್ಲಿ ನಿವೇಶನ ರಹಿತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಡಾ.ಜಿ. ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದರೂ ಯಾವೊಬ್ಬ ಬಡವರಿಗೂ ನಿವೇಶನ ಮಂಜೂರಾಗಿಲ್ಲ. ಜಿಎಂಐಟಿ ಕಾಲೇಜು ಸಮೀಪದ 41 ಎಕರೆ ಭೂಮಿ ಖರೀದಿಸಿದ್ದಾಗಿ ಹಿಂದಿದ್ದ ಜಿಲ್ಲಾಧಿಕಾರಿ ಗೌತಮ್ ಬಗಾದಿ ಹೇಳಿದ್ದರು. ನಂತರ ಅಲ್ಲಿ ನಿರ್ಮಿಸಿದ್ದ ನಿವೇಶನಗಳನ್ನು ಸಬಲರಿಗೇ ನೀಡಲಾಯಿತು. ಈ ಅಕ್ರಮ ಪರಿಶೀಲಿಸಲು ಕ್ರಮ ವಹಿಸಲಾಗಿದೆ ಎಂದು ನಂತರದ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದ್ದರೂ ಕೊಳೆಗೇರಿ ಜನರಿಗೆ ನಿವೇಶನ ಕಲ್ಪಿಸಲಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನವರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲಾಗಿತ್ತು. ಬಾತಿ ಬಳಿ 80 ಎಕರೆ ಭೂಮಿ ಖರೀದಿಸಿ ಕೊಳೆಗೇರಿಗಳ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಸಂಬಂಧ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡುವುದಾಗಿ ಅಂದಿನ ಡಿಸಿ ಭರವಸೆ ನೀಡಿದ್ದರು. ಈ ವಿಚಾರದ ಬಗ್ಗೆ ಡಿಸಿ ಕಚೇರಿಯ ಯೋಜನಾ ನಿರ್ದೇಶಕ ಮಹಾಂತೇಶ ಅವರಿಗೆ ಜವಾಬ್ದಾರಿ ನೀಡಿದ್ದರು.
ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಪರಿಶೀಲಿಸಿ, ಉಳ್ಳವರಿಗೆ ನೀಡಲಾದ ನಿವೇಶನ ರದ್ದುಪಡಿಸಿ, ಇಲ್ಲದವರಿಗೆ ನೀಡಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ನಿವೇಶನ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಎಚ್. ರೇಣುಕಾ ಯಲ್ಲಮ್ಮ, ಗೌರವಾಧ್ಯಕ್ಷ ಎಸ್.ಎಲ್. ಆನಂದಪ್ಪ, ಅಧ್ಯಕ್ಷ ಎಂ. ಶಬ್ಬೀರ್‌ಸಾಬ್, ಮಂಜುಳಾ, ಜಂಶಿದಾಬಾನು, ರೇಷ್ಮಾಬಾನು, ರೇಖಾ, ಅಸ್ಮಾಬಾನು, ರಾಜೇಶ್ವರಿ, ಸಲ್ಮಾಬಾನು, ಯೂಸೂಬ್‌ಸಾಬ್, ನೂರ್‌ಜಹಾನ್, ಸಿಕಂದರ್ ಇತರರು ಇದ್ದರು.