ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳು

ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳು

ಹರಿಹರದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ

ಹರಿಹರ, ನ. 22-  ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಹೆಚ್ಚಿಸಲು ಸರ್ಕಾರ ಸದಸ್ಯತ್ವ ಅಭಿಯಾನ, ವಿಶೇಷ ಪುಸ್ತಕಗಳ ಸಂಗ್ರಹದಂತಹ ಹಲವಾರು ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ತಿಳಿಸಿದರು.

ನಗರದ ಗ್ರಂಥಾಲಯದ ಸಭಾಂಗಣದಲ್ಲಿ ಹರಿಹರ ಗ್ರಂಥಾಲಯ ಶಾಖಾ ಇಲಾಖೆ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹದ ಆಚರಣೆ, ಪುಸ್ತಕ ಪ್ರದರ್ಶನ, ಸದಸ್ಯತ್ವ ಅಭಿಯಾನ ಮತ್ತು ವಿವಿಧ ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅವರು ಮಾತನಾಡಿದರು.

 ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ, ಓದುಗರಿಗೆ ಓದುವ ಹವ್ಯಾಸವನ್ನು ಬೆಳೆಸುವಂತೆ ಪ್ರೇರೇಪಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಗ್ರಂಥಾಲಯಗಳತ್ತ ಸೆಳೆಯುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ. ಓದುವ ಹವ್ಯಾಸದ ಜೊತೆಯಲ್ಲಿಯೇ ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಕಾರ್ಯಕ್ರಮಗಳನ್ನೂ  ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಮಾತನಾಡಿ, ನಗರದ ಗ್ರಂಥಾಲಯವು ತುಂಬಾ ವಿಶೇಷವಾಗಿ ಹಾಗು ಅತ್ಯಾಧುನಿಕವಾಗಿದ್ದು ಇದರ ಬೆಳವಣಿಗೆಗೆ ಬೇಕಾದ ಸಹಕಾರವನ್ನು ನಗರಸಭೆಯಿಂದ ನೀಡುವುದಾಗಿ ಭರವಸೆ ನೀಡಿದರು. 

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಗಳಿಗೆ ಸರ್ಕಾರವು ಹೆಚ್ಚಿನ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

 ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ಮಾತನಾಡಿ, ಕನ್ನಡ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.  ಡಾ.ಫ್ರಾನ್ಸಿಸ್ ಕ್ಸೇವಿಯರ್ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಹರಿಹರ ಗ್ರಂಥಾಲಯ ಸಹಾಯಕ ರವಿಕುಮಾರ್, ಜಿಲ್ಲಾ ಗ್ರಂಥಾಲಯದ ಮಂಜುನಾಥ ಬಗರಿ, ಕೆ.ಎಚ್. ಹರೀಶ್, ಬಿ.ಇ. ಮಹಾಸ್ವಾಮಿ, ಗೋಪಾಲಕೃಷ್ಣ, ರಮೇಶ, ಸುರೇಶ್, ಅರುಂಧತಿ ಸೇರಿದಂತೆ ಹಲವಾರು ಭಾಗವಹಿಸಿದ್ದರು.

error: Content is protected !!