ರಾಜ್ಯ ಸಹಕಾರಿ ಸಮಾವೇಶದಲ್ಲಿ ಪುಷ್ಪಗಿರಿ ಸ್ವಾಮೀಜಿ ಅಭಿಮತ
ದಾವಣಗೆರೆ, ನ.22- `ಮನಸ್ಸು’ ಕೆಡಿಸುವುದಕ್ಕೆ ಮತ್ತು ಕಟ್ಟುವುದಕ್ಕೆ ಕಾರಣವಾಗುತ್ತದೆ. ಅಂತಹ ಮನಸ್ಸನ್ನು ನಾವು ಮಾಡಿದ್ದರ ಫಲವಾಗಿ ಪುಷ್ಪಗಿರಿ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪನೆಯಾಗಿ, ನಾಡಿನ ಗಮನ ಸೆಳೆಯುವಂತಸಾಗಿದೆ ಎಂದು ಹಳೇಬೀಡು ಸಮೀಪದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಸಹಕಾರಿ ಸಮಾವೇಶದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಪುಷ್ಪಗಿರಿ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪನೆಯಾಗಿ 4 ವರ್ಷಗಳಲ್ಲಿ 10 ಜಿಲ್ಲೆಗಳ ವ್ಯಾಪ್ತಿಯಲ್ಲಿ 10 ಸಾವಿರ ಮಹಿಳಾ ಸ್ವ-ಸಹಾಯ ಸಂಘಗಳನ್ನು ಹೊಂದಿದ್ದು, ಕೋಟ್ಯಾಂತರ ರೂ.ಗಳ ವ್ಯವಹಾರ ನಡೆಸುತ್ತಿದೆ.
ಭಗವಂತ ಮನುಷ್ಯನಿಗೆ ಕೊಟ್ಟಿರುವ ದೇಹ, ಮನಸ್ಸು ಮತ್ತು ಶಕ್ತಿಯನ್ನು ಬಳಸಿಕೊಂಡು ಏನೂ ಬೇಕಾದರೂ ಸಾಧನೆ ಮಾಡಬಹುದೆಂಬುದಕ್ಕೆ ಉದಾಹರಣೆ ಸಮೇತ ವಿವರಿಸಿದರು.
ಟೀ ಮಾರುತ್ತಿದ್ದ ನರೇಂದ್ರ ಮೋದಿ ಅವರು 3ನೇ ಬಾರಿಗೆ ದೇಶದ ಪ್ರಧಾನಿಯಾಗಿರುವುದು ಎಂತಹ ಸಾಧನೆ ಎಂದು ಶ್ಲ್ಯಾಘಿಸಿದ ಸ್ವಾಮೀಜಿ, ದೇಶದ ಐಕ್ಯತೆ ಎತ್ತಿ ಹಿಡಿಯಲು ಸೌಹಾರ್ದ ಸಹಕಾರದ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಬಡವರ, ರೈತರ ಏಳಿಗೆಗೆ ಸಹಕಾರ ಕ್ಷೇತ್ರ ಶ್ರಮ ವಹಿಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದ್ದು, ದುರಾಸೆ ಸ್ವಾರ್ಥದಿಂದಾಗಿ ಎಲ್ಲಾ ವ್ಯವಸ್ಥೆಗಳಿಗೆ ಧಕ್ಕೆ ಉಂಟಾಗುತ್ತದೆ. ವಂಶ ರಾಜಕಾರಣ ಹೆಚ್ಚುತ್ತಿದ್ದು, ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪುಷ್ಪಗಿರಿ ಸ್ವಾಮೀಜಿ, ಸಹಕಾರ ಕ್ಷೇತ್ರ ಉಳ್ಳವರ ಪಾಲಾಗದೆ, ದೇಶದ ಐಕ್ಯತೆ, ಶ್ರೇಷ್ಠತೆ ಕಾಪಾಡುವ ಹಳ್ಳಿ ಜನರ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಿಗಬೇಕೆಂದರು.