ಕಾರ್ತಿಕ ಗೌರಿಗೆ ಒಂಭತ್ತು ದಿನಗಳ ಕಾಲವೂ ಆರತಿ ತೆಗೆದು ಕೊಂಡು ಹೋಗುವವರು ದಿನಕ್ಕೊಂದು ಬಗೆಯ ಆರತಿ ತೆಗೆದುಕೊಂಡು ಹೋಗುತ್ತಿದ್ದರು. ಬಾಳೆ, ಪೇರಲ ಮುಂತಾದ ಹಣ್ಣುಗಳನ್ನು ಕತ್ತರಿಸಿ, ಬಟ್ಟಲಂತೆ ಮಾಡಿ ಅದಕ್ಕೆ ಬತ್ತಿ ಎಣ್ಣೆ ಹಾಕಿ ದೀಪ ಮಾಡಿಕೊಂಡು ಒಂದೊಂದು ದಿನ ತೆಗೆದುಕೊಂಡು ಹೋದರೆ ಬದನೆಕಾಯಿ, ಸೌತೆಕಾಯಿ,ಗಜ್ಜರಿ ಮುಂತಾದ ತರಕಾರಿಗಳನ್ನೂ ಅದೇ ರೀತಿ ಕತ್ತರಿಸಿ ಬಟ್ಟಲಂತೆ ಮಾಡಿ ಎಣ್ಣೆ ಬತ್ತಿ ಹಾಕಿ ದೀಪ ಮಾಡಿಕೊಂಡು ಮತ್ತೆ ಕೆಲವು ದಿನ ಆರತಿ ತೆಗೆದುಕೊಂಡು ಹೋಗುತ್ತಿದ್ದರು. ಅದೇ ರೀತಿ ಗೋಧಿ ಹಿಟ್ಟು ಅಥವಾ ಅಕ್ಕಿ ಹಿಟ್ಟನ್ನೂ ಕಲಸಿ ಅದರಲ್ಲಿ ದೀಪ ಮಾಡಿ ಆರತಿ ಒಯ್ಯುತ್ತಿದ್ದರು.
ಹೀಗೆ ಗೌರಿ ಆರತಿ ತೆಗೆದುಕೊಂಡು ಹೋಗುವ ಹುಡುಗಿಯರ ಜೊತೆಗೆ ಅವರ ಪುಟ್ಟ ಪುಟ್ಟ ತಮ್ಮ ಮತ್ತು ತಂಗಿಯರು ಸಹ ಸಡಗರ ಸಂತೋಷದಿಂದ ದೇವಸ್ಥಾನಕ್ಕೆ ಹೋಗುತ್ತಿದ್ದರು. `ರತ್ನಕ್ಕ ಏಕೆ ಆರತಿ ತೆಗೆದುಕೊಂಡು ಹೋಗುತ್ತಿಲ್ಲ?’ ಎಂದು ಪುಟ್ಟ ತಮ್ಮ ಶೆಟ್ರ ವೆಂಕಟೇಶ ತಾಯಿಯನ್ನು ಕೇಳಿದ. `ನಮ್ಮನಿಯಾಗೆ ಆ ಪದ್ಧತಿ ಇಲ್ಲ’ ಎಂದು ತಾಯಿ ನಾಗವೇಣಮ್ಮ ಹೇಳಿದರೂ ವೆಂಕಟೇಶ ಪೀಡಿಸುತ್ತಿದ್ದ. `ಮಗು ಅಷ್ಟು ಕೇಳ್ತೈತಿ, ಆರತಿ ಮಾಡಿ ಕಳಸೆ ನಾಗವೇಣಿ’ ಎಂದು ಅತ್ತೆ ಸುಭದ್ರಮ್ಮ ಸೊಸೆಗೆ ಹೇಳಿದರು. ತಾಯಿ ಮಾಡಿಕೊಟ್ಟ ಆರತಿ ಹಿಡಿದುಕೊಂಡು ತಮ್ಮ ವೆಂಕಟೇಶನನ್ನೂ ಕರೆದುಕೊಂಡು ರತ್ನ ತನ್ನ ಗೆಳತಿಯರೊಡನೆ `ಗೌರಿ ಗೌರಂತೆ, ಗಣಪತಿಯಂತೆ, ಕೆಸರು ಗೊಂಬೆಯಂತೆ, ನಿಲ್ಲ ನಿಲ್ಲ ಗೌರವ್ವಾ, ಗೌರವ್ವಾ, ನಿಲ್ಲಸ್ಕೊಂಬಿ ಉಡಿಸೇನಿ, ಉಡಸೇನಿ, ಪಾತ್ರಿಲ ಪಣಿವಾರ.. ನಮ್ಮ ಗೌರವ್ವಗೆ ಮುತ್ತಿನ ಜನಿವಾರ.. ಮುತ್ತಿನಂತ ಮುಂಗುರುಳಿ, ಏಕದಾರುತಿ ಗೌರಿ ಬೆಳಗದಾರುತಿ. ಹಸಿರು ಸೀರಿ ಉಡಿಸೀನಿ,ಉಡಸೀನಿ, ಹಸಿರು ತೊಪ್ಲಾ ತೊಡಸೀನಿ, ತೊಡಸೀನಿ, ಹೋಗಬಾರೆ ತವರು ಮನೀಗೇ…’ ಎಂದೆಲ್ಲಾ ಹಾಡು ಹೇಳುತ್ತಾ ಮೊದಲ ದಿನದ ಆರತಿ ಮಾಡಿ ಬಂದಳು.
ದಾವಣಗೆರೆ ಹಳೆ ಊರಿನ ಗೌರಿ ಆರತಿಯ ಸ್ವಾರಸ್ಯಗಳು…
ಮನೆಗೆ ಬರುತ್ತಲೇ, ಶೆಟ್ರ ವೆಂಕಟೇಶ `ಐದನೇ ದಿನ ಯಾವತ್ತು? ಐದನೇ ದಿನ ಯಾವತ್ತು??’ ಎಂದು ಪದೇ ಪದೇ ಕೇಳತೊಡಗಿದ !. `ಯಾಕಪ್ಪಾ ಐದನೇ ದಿನದ ಬಗ್ಗೆನೇ ಅಷ್ಟು ಕೇಳ್ತಿ?’ ಎಂದು ತಾಯಿ ನಾಗವೇಣಮ್ಮ ಕೇಳಿದಾಗ ವೆಂಕಟೇಶ ಬಾಯಿಬಿಟ್ಟ `ಐದನೇ ದಿನ ಹೂರಣದ ಆರತಿ ಮಾಡಬೇಕಲ್ಲ ಅದಕ್ಕೆ’ ಎಂದ. ಕೂಡಲೇ ತಾಯಿ ನಾಗ್ವೇಣಮ್ಮ ಹಾಗೂ ಅಜ್ಜಿ ಸುಭದ್ರಮ್ಮ ಪುಟ್ಟ ವೆಂಕಟೇಶನನ್ನ ತಬ್ಬಿಕೊಂಡು `ಅಯ್ಯೋ ಬಂಗಾರು, ಹೂರ್ಣ ತಿನ್ನಬೇಕು ಅಂತ ಆಸಿ ಆಗಿದ್ರೆ ಬಾಯಿಬಿಟ್ಟು ಹೇಳಬಾರದಿತ್ತೇನೋ ಚಿನ್ನ, ಮಾಡಿಕೊಡುತ್ತಿದ್ವಲ್ಲ, ಅದಕ್ಕೆ ಯಾಕೆ ಗೌರಿ ಆರತಿ ನೆವಾ ಮಾಡ್ಕೊಂಡ್ಯೋ ನನ್ ರಾಜಾ’ ಎಂದರು. ಈಗೆಲ್ಲ ಮಕ್ಕಳಿಗೆ ಸಿಹಿ ತಿಂಡಿ ಎಂದರೆ ಮುಖ ಸಿಂಡರಿಸಿಕೊಂಡು ಮಾರು ದೂರ ಹೋಗುತ್ತಾರೆ. ಆದರೆ ನಮ್ಮ ಬಾಲ್ಯದಲ್ಲಿ ನಾವೆಲ್ಲಾ ಸಿಹಿ ತಿಂಡಿಗಳಿಗೆ ಹಾತೊರೆಯುತ್ತಿದ್ದೆವು. ಹೂರಣದ ದೀಪ ಮಾಡಿ ಅದಕ್ಕೆ ತುಪ್ಪ ಹಾಕಿ ಆರತಿ ತೆಗೆದುಕೊಂಡು ಹೋಗಿ ಮನೆಗೆ ಬಂದ ಮೇಲೆ ಆ ಆರತಿಯನ್ನು ಗೌರಿ ಪ್ರಸಾದ ಎಂದು ತಿನ್ನಲಾಗುತ್ತಿತ್ತು. ಸಿಹಿ ಹೂರಣದ ತುಪ್ಪದ ಆರತಿ ರುಚಿಯೋ ರುಚಿ. ಅಂತೂ ಶೆಟ್ರ ವೆಂಕಟೇಶನಿಗೆ ಅದು ಲಭ್ಯವಾಯಿತು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ