ಸುಮಾರು 58 ವರ್ಷಗಳ ಹಿಂದೆ ಇರಬಹುದು, ನಗರದ ಸೀತಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಉಪಾಧ್ಯಾಯಿನಿಯಾಗಿ ಗಿರಿಜಮ್ಮ ಎಂಬುವವರು ಇದ್ದರು. ಇವರ ತಾಯಿ ಹಾದಿಗಲ್ಲು ಲಕ್ಷ್ಮಿದೇವಮ್ಮ. ಇವರೆಲ್ಲ ತೀರ್ಥಹಳ್ಳಿಯ ಕಡೆಯವರು ಹಾಗೂ ನಮ್ಮ ತಾಯಿಯ ಸಮೀಪದ ಬಂಧುಗಳು. ಇವರು ನಗರದ ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಮಠದ ಮುಂದೆ ದೇಸಾಯಿ ಕಾಂಪೌಂಡ್‌ನಲ್ಲಿ ವಾಸವಾಗಿದ್ದರು. ನಂತರ ಅಲ್ಲೇ ಪಕ್ಕದ ದೇವಳೇ ಕಾಂಪೌಂಡಿಗೆ ಸ್ಥಳಾಂತರಗೊಂಡರು.
ಇವರು ಒಮ್ಮೆ ಚೌಕಿಪೇಟೆಯ ನಮ್ಮ ಮನೆಗೆ ಬಂದು ನಮ್ಮ ತಾಯಿಯ ಜೊತೆಗೆ ಮಾತನಾಡುತ್ತಾ ಕುಳಿತಿದ್ದಾಗ ಪಕ್ಕದ ಬಾಲ್ಕನಿಯಲ್ಲಿ ಬೀದಿಯ ಕೆಲವು ಮಕ್ಕಳು ಒಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು. ಒಬ್ಬ ಪುಟ್ಟ ಹುಡುಗ ಹೇಳಿದ `ನಾಳಿ ನಾನು ಆನಿ ತಿಂತೀನಿ’ ಎಂದು. ಅದಕ್ಕೆ ಅವನ ಅಣ್ಣ ಹೇಳಿದ `ಇವ್ನು ಪೂರ್ತಿ ಆನಿ ತಿನ್ನಲ್ಲ, ಬರಿ ಸೊಂಡ್ಲಿ ತಿಂತಾನೆ ಅಷ್ಟೇ, ನಾನು ಪೂರ್ತಿ ಆನಿ ತಿಂತೀನಿ’ ಎಂದು. ಇನ್ನೊಬ್ಬ ಹುಡುಗ ಹೇಳಿದ `ನಾಳಿ ನಾನು ಕುದುರೀ ತಿಂತೀನಿ’. ಮತ್ತೊಬ್ಬ ಹುಡುಗಿ ಹೇಳಿದಳು `ನಾನು ನಂದಿ ಬಸವಣ್ಣ ತಿಂತೀನಿ’. ಮತ್ತೋರ್ವ ಹುಡುಗ ಹೇಳಿದ `ನಾನು ಗೋಪುರ ತಿಂತೀನಿ’. ಇನ್ನೊಬ್ಬ ಹೇಳಿದ `ಅಕ್ಕ ತಂಗಿ ದೊಡ್ಡದು, ನಾನು ಅದನ್ನು ತಿಂತೀನಿ’ಅಂತ.
ಇದನ್ನೆಲ್ಲಾ ಕೇಳಿಸಿಕೊಂಡ ಗಿರಿಜಮ್ಮನವರ ತಾಯಿ ಲಕ್ಷ್ಮಿ ದೇವಮ್ಮ ಆಶ್ಚರ್ಯ ಹಾಗೂ ಗಾಬರಿಯಿಂದ `ಏನೇ ಇವು ಮಕ್ಕಳು ರಾಕ್ಷಸರ ತರಾ ಆನೆ ಕುದುರೆ ನಂದಿ ಏನೇನೋ ತಿಂತೀವಿ ಅಂತಾವಲ್ಲ!! ಏನಿದು?’ ಎಂದು ನಮ್ಮ ತಾಯಿಯನ್ನು ಕೇಳಿದರು.
ನಮ್ಮ ತಾಯಿ ನಗುತ್ತಾ ಹೇಳಿದರು `ಲಕ್ಷ್ಮಿದೇವಕ್ಕ ಇವತ್ತು ಕಾರ್ತಿಕ ಮಾಸದ ಹುಣ್ಣಿಮೆ ನೋಡಿ, ಇಲ್ಲೇ ಪಕ್ಕದ ಬಕ್ಕೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಗೌರಿ ಅಂತ ಕೂರಿಸಿರುತ್ತಾರೆ. ಇವತ್ತು ರಾತ್ರಿ ಗೌರಿಗೆ ಆರತಿ ಮಾಡಲು ಹೋಗುವವರು ಅನೇಕ ಆಕಾರದ ಸಕ್ಕರೆ ಅಚ್ಚುಗಳನ್ನು ಸಹಾ ತೆಗೆದುಕೊಂಡು ಹೋಗುತ್ತಾರೆ. ಸಕ್ಕರೆ ಅಚ್ಚುಗಳು ಆನೆ, ಕುದುರೆ, ನಂದಿ, ಗೋಪುರ, ಮಂಟಪ, ಕಳಸ, ಚಚ್ಚೌಕ, ಈಶ್ವರಲಿಂಗ, ತ್ರಿಶೂಲ ದೀಪ, ಕೋಳಿ ಹೂವು, ಬಾಳೆಹಣ್ಣಿನ ಚಿಪ್ಪು, ಷಟ್ ಕೋನ, ಅಷ್ಟ ಕೋನ ಮೊಸರು ಕಡೆಯುವ ಅಕ್ಕ ತಂಗಿಯರು ಹೀಗೆ ಅನೇಕ ಆಕೃತಿಯಲ್ಲಿರುತ್ತವೆ.
ದಾವಣಗೆರೆ ಹಳೆ ಊರಿನ ಗೌರಿ ಆರತಿಯ ಸ್ವಾರಸ್ಯಗಳು…
ಆರತಿ ಮುಗಿಸಿ ಬಂದ ಮೇಲೆ ಈ ಸಕ್ಕರೆ ಅಚ್ಚಿನ ಗೊಂಬೆಗಳನ್ನು ಮಕ್ಕಳಿಗೆ ತಿನ್ನಲು ಕೊಡುವುದು ಪದ್ಧತಿ, ದೊಡ್ಡವರೂ ತಿನ್ನುತ್ತಾರೆ. ಈ ಮಕ್ಕಳು ಮಾತನಾಡುತ್ತಿರುವುದು ಆ ಸಕ್ಕರೆ ಅಚ್ಚಿನ ಬೊಂಬೆಗಳ ಬಗ್ಗೆ’ ಎಂದಾಗ ಗಿರಿಜಮ್ಮ ಹಾಗೂ ಅವರ ತಾಯಿ ಬಿದ್ದು ಬಿದ್ದು ನಕ್ಕರು.
ಆಗೆಲ್ಲಾ ಇಂತಹ ಸಕ್ಕರೆ ಅಚ್ಚುಗಳನ್ನು ನಗರದ ಕೈಲಾಸಪೇಟೆ ಅಂದರೆ ಈಗಿನ ಕಾಳಿಕಾದೇವಿ ರಸ್ತೆ ಅಥವಾ ಬಿ.ಎಸ್.ಚನ್ನಬಸಪ್ಪ ಅಂಗಡಿಯ ರಸ್ತೆ ಮತ್ತು ತಿರುಕಪ್ಪನ ಮಠದ ರಸ್ತೆಯ ಮೂಲೆಯಲ್ಲಿದ್ದ ಗುಳಾಡಿಕಿ ಉಂಡೆ, ಗೋಧಿ ಸಂಡಿಗೆ ಮಾಡುವವರ ಮನೆಯ ಆಸುಪಾಸಿನಲ್ಲಿ ಸಕ್ಕರೆ ಅಚ್ಚುಗಳನ್ನು ಮಾಡುತ್ತಿದ್ದರು. ಹಾಗೆಯೇ ಅದೇ ರಸ್ತೆಯ ಸೋಡಾ ನಂಜುಂಡಪ್ಪನವರ ಮನೆ ಅಥವಾ ಬೆಣ್ಣೆ ನಾರಾಯಣ ಶೆಟ್ಟರ ಮನೆಯ ಆಸು ಪಾಸಿನಲ್ಲೂ ಯಾರೋ ಸಕ್ಕರೆ ಅಚ್ಚುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ನಂತರ ನಗರದ ಸ್ಟೇಷನ್ ರಸ್ತೆಯಲ್ಲಿ ಅಂದರೆ ಗಡಿಯಾರ ಕಂಬದ ಬಳಿ ಭಾನುವಳ್ಳಿ ಬಸೆಟ್ಟಪ್ಪನವರ ತಿಂಡಿ ಅಂಗಡಿ ಹಾಗೂ ಬಳ್ಳಾರಿ ವೆಂಕಟಪ್ಪನವರ ಅಂಗಡಿಯಲ್ಲೂ ಸಕ್ಕರೆ ಅಚ್ಚುಗಳ ಮಾರಾಟ ಇತ್ತು. ತದನಂತರದಲ್ಲಿ ಚೌಕಿಪೇಟೆಯ ಹತ್ತಿ ಹಾಸಿಗೆ ವ್ಯಾಪಾರಿ ಸುಬ್ರಾಯ ಶೆಟ್ಟರು ಕೃಷ್ಣವೇಣಮ್ಮ ದಂಪತಿ ಸಹಾ ಸಕ್ಕರೆ ಅಚ್ಚು ಮಾಡಿ ಮಾರಾಟ ಮಾಡುತ್ತಿದ್ದರು.
ಕೆಲ ವರ್ಷಗಳ ಕೆಳಗೆ ನಗರದ ಆಹಾರ 2000 ನವರು ಸಹಾ ಸಂಕ್ರಾಂತಿ ಸಂದರ್ಭದಲ್ಲಿ ಆಕರ್ಷಕ ಸಕ್ಕರೆ ಅಚ್ಚು ಗಳನ್ನು ಮಾಡಿದ್ದರು. ನಮ್ಮ ಬಾಲ್ಯದಲ್ಲಿ ಇಂತಹ ಸಕ್ಕರೆ ಅಚ್ಚುಗಳನ್ನು ಮಾಡಲು ಬೇಕಾದ ಮರದ ಅಚ್ಚುಗಳನ್ನು ನಗರದ ಹಗೇವುದಿಬ್ಬ ವೃತ್ತದ ಸಮೀಪ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯಲ್ಲಿ, ಶಾಸ್ತ್ರಿ ಕಣದ ಬಳಿ ಹಾಗೆಯೇ ದೇವಾಂಗಪೇಟೆ ಬಳಿ ಇದ್ದ ಕೆಲ ಬಡಗಿ ಆಚಾರ್ ಗಳು ಮಾಡಿಕೊಡುತ್ತಿದ್ದರು. ಈ ಮರದ ಅಚ್ಚುಗಳು ಗೊಂಬೆಗಳ ಆಕಾರ ಗಳನ್ನು ಅವಲಂಬಿಸಿ ಎರಡು, ನಾಲ್ಕು, ಆರು ಹೀಗೆ ಭಾಗಗಳಾಗಿರುತ್ತಿದ್ದವು. ಇವುಗಳನ್ನು ಒಟ್ಟುಗೂಡಿಸಿ ಅದರೊಳಗೆ ಸಕ್ಕರೆ ಪಾಕವನ್ನು ಹಾಕ ಬೇಕು. ಹಾಗೆ ಒಟ್ಟುಗೂಡಿಸಲಿಕ್ಕಾಗಿ ಹಾಕಲು ರಬ್ಬರ್ ಬ್ಯಾಂಡ್ ಗಳು ಆಗ ಇರಲಿಲ್ಲ. ಬದಲಿಗೆ ಸೈಕಲ್ಲಿನ ಪಂಕ್ ಚರ್ ಆದ ಹಳೆ ರಬ್ಬರ್ ಟ್ಯೂಬ್ ಗಳನ್ನೇ ಕತ್ತರಿಸಿ ರಬ್ಬರ್ ಬ್ಯಾಂಡ್ ಗಳ ತರ ಮಾಡಿ ಹಾಕುತ್ತಿದ್ದುದು ರೂಢಿ.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ