ಪತ್ರಕರ್ತರು ಸಮಾಜ ಮುಖಿ ಕಾಯಕ ಮಾಡಬೇಕು

ಪತ್ರಕರ್ತರು ಸಮಾಜ ಮುಖಿ ಕಾಯಕ ಮಾಡಬೇಕು

ಹಿರಿಯ ಪತ್ರಕರ್ತ ವೀರಪ್ಪ ಬಾವಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹಿತ ನುಡಿ

ದಾವಣಗೆರೆ, ನ. 20- ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಕರ್ತರಿಗೆ ತುಂಬಾ ಗೌರವದ ಸ್ಥಾನವಿದೆ. ಸಮಾಜದ ಓರೆಕೋರೆ ತಿದ್ದುವಂತಹ ಪತ್ರಿಕಾ ವೃತ್ತಿ ಗೌರವ ಕಾಪಾಡುವ ಮೂಲಕ ಸಮಾಜಕ್ಕೆ ಸಾಧ್ಯವಾದ ಒಳ್ಳೆಯದನ್ನು ಮಾಡುವಂತೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹಿತನುಡಿದರು.

ನಗರದ ಶ್ರೀ ಹಾಲಕೆರೆ ಅನ್ನದಾನೀಶ್ವರ ಶಾಖಾ ಮಠದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರೂ, `ಇಂದಿನ ಸುದ್ದಿ’ ಸಂಪಾದಕರೂ ಆಗಿದ್ದ ವೀರಪ್ಪ ಎಂ. ಬಾವಿಯವರ ನುಡಿ ನಮನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. 

ಪತ್ರಕರ್ತರು ಹಮ್ಮು ಬಿಮ್ಮುಗಳನ್ನು ಬಿಟ್ಟು, ಸಮಾಜಮುಖಿಯಾಗಿ ತಮ್ಮ ಕಾಯಕ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು. 

ಅನ್ನದಾನೀಶ್ವರ ಬೆಳವಣಿಗೆಯಲ್ಲಿ ಅಥಣಿ ಎಸ್.ವೀರಣ್ಣ, ಎನ್. ಅಡಿವೆಪ್ಪ ಅವರುಗಳ ಜೊತೆಗೆ ವೀರಪ್ಪ ಬಾವಿ ಅವರು ಹೆಗಲಿಗೆ ಹೆಗಲು ಕೊಟ್ಟವರು. ಎರೆಸೀಮೆಯಿಂದ ಬಂದ ಜನರಿಗೆ ಬಾಯಾರಿದವರಿಗೆ ನೀರಿನ ಬಾವಿ ಕಂಡಂತೆ ಕಷ್ಟ – ಸುಖಕ್ಕೆ ವೀರಪ್ಪ ಬಾವಿ ಆಗುತ್ತಿದ್ದ ವ್ಯಕ್ತಿ ಎಂದು ಅವರು ಸ್ಮರಿಸಿದರು.

ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ವೀರಪ್ಪ ಎಂ.ಬಾವಿ ಕೇವಲ ಪತ್ರಕರ್ತ ಅಷ್ಟೇ ಆಗಿರದೆ, ಸಂಸ್ಕಾರ, ಸದ್ಗುಣ ಮೈಗೂಡಿಸಿಕೊಂಡಿದ್ದರು ಎಂದು ಶ್ಲ್ಯಾಘಿಸಿದರು.  

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ತುಂಬಾ ಸರಳ ವ್ಯಕ್ತಿತ್ವದ ವೀರಪ್ಪ ಬಾವಿ ಕಷ್ಟಕಾಲದಲ್ಲಿ
ಪತ್ರಿಕಾ ರಂಗ ಪ್ರವೇಶಿಸಿ, ಸ್ವಂತ ಪತ್ರಿಕೆ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದರು. ಲಾಭವಿಲ್ಲದಿದ್ದರೂ ಕಾಯಕ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಹಾಲಕೆರೆ ಮಠ ಟ್ರಸ್ಟ್ ಅಧ್ಯಕ್ಷರೂ ಆದ ಹಿರಿಯ ಲೆಕ್ಕಪರಿಶೋಧಕ ಡಾ. ಅಥಣಿ ಎಸ್‌.ವೀರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೀರಪ್ಪ ಬಾವಿ ಅವರು ಎಷ್ಟೇ ಕಷ್ಟವಿದ್ದರೂ ಸಮಚಿತ್ತದಿಂದ ಬಾಳಿ ಬದುಕಿದ್ದರು ಎಂದು  ಹೇಳಿದರಲ್ಲದೇ, ವೀರಪ್ಪ ಬಾವಿ ಮತ್ತು ನಡುವಿನ ಬಾಂಧವ್ಯವನ್ನು ಮೆಲಕು ಹಾಕಿದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್‌ ಡಿಸೌಜ, ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಎನ್.ವಿ. ಬದರೀನಾಥ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವೀರಪ್ಪ ಬಾವಿ ಅವರ ಧರ್ಮಪತ್ನಿ ಶ್ರೀಮತಿ ಮಂಗಳಾ, ಪುತ್ರರಾದ ಮುತ್ತುರಾಜ ಎಂ. ಬಾವಿ, ಅನಿಲ್‌ಕುಮಾರ ಎಂ.ಬಾವಿ, ದಾವಣಗೆರೆ ಟೈಮ್ಸ್ ಸಂಪಾದಕ ಜೆ.ಎಸ್. ವೀರೇಶ್‌, ಪತ್ರಕರ್ತರಾದ ಸಿ. ವೇದಮೂರ್ತಿ, ಮಾಗನೂರು ಮಂಜಪ್ಪ, ಎಚ್.ಎಂ.ಪಿ. ಕುಮಾರ್, ಇ.ಎಂ.ಪವನ್‌, ಮಹೇಶ ಕಾಶೀಪುರ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು `ಇಂದಿನ ಸುದ್ದಿ’ ಬಳಗದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿತ್ತು.

error: Content is protected !!