ದಾವಣಗೆರೆ, ನ.20- ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲು ಚಲಿಸುವ ವೇಳೆ ಪ್ರಯಾಣಿಕರೊಬ್ಬ ಹತ್ತಲು ಪ್ರಯತ್ನಿಸಿ, ಆಯತಪ್ಪಿ ಪ್ಲಾಟ್ ಫಾರ್ಮ್ ಮೇಲೆ ಬಿದ್ದ ವೇಳೆ ಜಿಲ್ಲಾ ಗೃಹ ರಕ್ಷಕ ದಳದ ಎನ್. ಲಕ್ಷ್ಮಣ ನಾಯ್ಕ ತಕ್ಷಣಕ್ಕೆ ಪ್ರಯಾಣಿಕನನ್ನು ಪ್ರಾಣಾಪಾಯದಿಂದ ಪಾರುಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎನ್. ಲಕ್ಷ್ಮಣ ನಾಯ್ಕ ಅವರ ಸಮಯ ಪ್ರಜ್ಞೆ ಮೆಚ್ಚಿದ ಜಿಲ್ಲಾ ಕಮಾಂಡೆಂಟ್ ಮತ್ತು ಸಿಬ್ಬಂದಿ ಶನಿವಾರ ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ ಸನ್ಮಾನಿಸಿ, ಗೌರವಿಸಿದರು.
ಈ ವೇಳೆ ಜಿಲ್ಲಾ ಕಮಾಂಡೆಂಟ್ ಡಾ. ಸುಜಿತ್ ಕುಮಾರ್, ಎಫ್ಡಿಎ ಮನ್ಸೂರ್ ಅಹಮದ್, ಕಿಶೋರ್ ಅಮ್ಮಿನ್ ಬಾವಿ, ಘಟಕಾಧಿಕಾರಿ ಕೆ.ಎಸ್. ಅಮರೇಶ್, ಯಲ್ಲಪ್ಪ, ಹೆಚ್.ಕೆ. ಹಾಲೇಶ್, ಲಕ್ಷ್ಮೀಪತಿ ಮತ್ತು ಸಿಬ್ಬಂದಿ ಇದ್ದರು.