ಕನ್ನಡ ಎಂಬ ಕಾಡನ್ನು ಅದರ ಪಾಡಿಗೆ ಬೆಳೆಯಲು ಬಿಡಬೇಕು

ಕನ್ನಡ ಎಂಬ ಕಾಡನ್ನು ಅದರ ಪಾಡಿಗೆ ಬೆಳೆಯಲು ಬಿಡಬೇಕು

ಹಿರೇಮೇಗಳಗೇರೆ ಪಾಟೀಲ್ ಸಿದ್ದನಗೌಡ ಕಾಲೇಜ್ `ಕನ್ನಡ ಹಬ್ಬ’ದಲ್ಲಿ ಕೆ.ಉಚ್ಚೆಂಗೆಪ್ಪ

ಹರಪನಹಳ್ಳಿ.ನ.20 – ಕನ್ನಡ ಎಂಬ ಕಾಡನ್ನು ಅದರ ಪಾಡಿಗೆ ಬೆಳೆಯಲು ಬಿಡಬೇಕೇ ಹೊರತು, ಅದನ್ನು   ನಾಶಪಡಿಸುವ ಕೆಲಸ ಮಾಡಬಾರದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಅಭಿಪ್ರಾಯಿಸಿದರು. 

ಪಟ್ಟಣದ ಹಿರೇಮೇಗಳಗೇರೆ ಪಾಟೀಲ್ ಸಿದ್ದನಗೌಡ ಪದವಿ ಮಹಾ ವಿದ್ಯಾಲಯದಲ್ಲಿ ಇಂದು  ಹಮ್ಮಿಕೊಳ್ಳಲಾಗಿದ್ದ ಕ್ರೀಡಾ   ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಕನ್ನಡಹಬ್ಬ  ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಕನ್ನಡ ಪ್ರಜ್ಞೆ ಇಂದು ಬಹುದೊಡ್ಡ ತಲ್ಲಣಕ್ಕೆ ಒಳಗಾಗಿದೆ. ಕನ್ನಡ ಜ್ಞಾನದ ಮೂಲ ಎನ್ನುವ ಮುಖ್ಯ ನೆಲೆಯಿಂದ ನಾವು ದೂರ ಬಂದಿದ್ದೇವೆ.  ಕನ್ನಡ ಎನ್ನುವುದು ಬದುಕಿಗೆ ಬೇಕಿರುವ ವಿವೇಕದ ಸಂಕಥನ ಎಂಬುದನ್ನು ನಾವೆಲ್ಲ ಮರೆಯುತ್ತಿದ್ದೇವೆ.   ಕನ್ನಡ ಭಾಷೆ ಇಂದು ಇಂಗ್ಲೀಷಿನ ವ್ಯಾಪಕ ಬಳಕೆಯಿಂದಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ  ಎಂದು ವಿಷಾದ ವ್ಯಕ್ತಪಡಿಸಿದರು.

ಹೆಚ್.ಪಿ.ಎಸ್ ಪದವಿ ಕಾಲೇಜು ಪ್ರಾಚಾರ್ಯ ಡಾ.ಮುತ್ತೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು. ಭಾಷೆ ಉಳಿಯಬೇಕೆಂದರೆ, ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ಕನ್ನಡದಲ್ಲಿ ಲಭ್ಯವಿರದಿದ್ದನ್ನು ದೊರಕಿಸಿಕೊಳ್ಳುವಲ್ಲಿ ನಮ್ಮ ಕೌಶಲ್ಯ ಹಾಗೂ ಸಾಮರ್ಥ್ಯ ರೂಪುಗೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ  ಡಿ.ರಾಮನಮಲಿ ಮಾತನಾಡಿ,  ರಾಜ್ಯೋತ್ಸವ ಬಂದಾಗ ಕಾರ್ಯಕ್ರಮಗಳು, ಹಾಡುಗಳು ಹಾಗೂ ಮನರಂಜನೆಗೆ ಮಾತ್ರ ಭಾಷೆಯನ್ನು ಉಳಿಸುತ್ತಿದ್ದೇವೆ. ಕನ್ನಡವನ್ನು ಜ್ಞಾನದ, ಅಧಿಕಾರದ ಹಾಗೂ ಅನ್ನದ ಭಾಷೆಯಾಗಿ ಬೆಳೆಸಬೇಕು ಎಂದರು

ಕಾಲೇಜು ಪ್ರಾಚಾರ್ಯ ಎಂ.ಸಿ. ಬೆನಕನಕೊಂಡ ಮಾತನಾಡಿ, ನಾವೆಲ್ಲರು ಕನ್ನಡ ಉಳಿವಿಗಾಗಿ ಹೋರಾಟ ಮಾಡುವ ಅಗತ್ಯ ಇದ್ದು, ರಾಜ್ಯದ ಹಲವಡೆ ಗಡಿ ವಿವಾದಗಳು ಆರಂಭವಾಗಿವೆ. 

ನಿಜವಾದ ಸಾಹಿತಿಗಳಿಗೆ ಗೌರವ, ಸನ್ಮಾನಗಳು ಸಿಗುತ್ತಿಲ್ಲ. ಉದ್ಯೋಗದ ಕಾರಣಗಳಿಗಾಗಿ, ಬಹುತೇಕ ಜನರು ಇಂಗ್ಲೀಷನ್ನೇ ಅನ್ನದ ಭಾಷೆಯಾಗಿಸಿಕೊಳ್ಳುತ್ತಿದ್ದಾರೆ ಎಂದರು

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹರಪನಹಳ್ಳಿ ಪ್ರಾದೇಶಿಕ ವಲಯದ  ಅಧಿಕಾರಿ  ಬಸವರಾಜಪ್ಪ ಸಿ.ಎಸ್, ಉಪನ್ಯಾಸಕರಾದ ಟಿ.ಬಸವರಾಜ, ಪ್ರವೀಣ್ ಕುಮಾರ್‌, ಆನಂದ ಕರುವಿನ, ಡಾ.ಪ್ರಭಾಕರ್, ನವೀನ್ ಕುಮಾರ, ಭಾವನಿ, ಅರುಣುಕುಮಾರ, ಗೀತಾ, ಸಂಗೀತಾ, ಗುಡ್ಡಪ್ಪ.ಕೆ, ವಿದ್ಯಾರ್ಥಿ ಕಾರ್ಯದರ್ಶಿ ಜಿ.ಎಂ.ಹರ್ಷಿತ, ಸಹಕಾರ್ಯದರ್ಶಿ ನಾಗರತ್ನ .ಎನ್, ಅಧ್ಯಾಪಕ ಕಾರ್ಯದರ್ಶಿ ಕೊಟ್ರಗೌಡ, ಕೊಟ್ರೇಶ್‌ ಸೇರಿದಂತೆ ಇತರರು ಇದ್ದರು.

error: Content is protected !!