ಅನರ್ಹರ ಕಾರ್ಡ್ ರದ್ದು ಮಾಡುವುದು ಒಳ್ಳೆಯದು : ಸಚಿವ ದಿನೇಶ್ ಗುಂಡೂರಾವ್
ದಾವಣಗೆರೆ, ನ. 20 – ನಾನು ಈ ಹಿಂದೆ ಆಹಾರ ಸಚಿವನಾಗಿದ್ದ ಸಂದರ್ಭದಲ್ಲಿ 20 ಲಕ್ಷ ಅನರ್ಹ ಪಡಿತರ ಕಾರ್ಡುಗಳನ್ನು ರದ್ದು ಮಾಡಿದ್ದೆ. ಅನರ್ಹರಿಗೆ ಕಾರ್ಡುಗಳನ್ನು ರದ್ದು ಮಾಡುವುದು ಒಳ್ಳೆಯದೇ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.85ರಷ್ಟು ಜನರು ಬಡವರಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಲಾಗುತ್ತಿದೆ ಎಂದರು.
ಸಾವಿರ ಕಾರ್ಡು ರದ್ದು ಪಡಿಸುವಾಗ ಹತ್ತು, ಇಪ್ಪತ್ತು ಇಲ್ಲವೇ ಐವತ್ತು ನೈಜ ಬಿಪಿಎಲ್ ಕಾರ್ಡಿನವರದ್ದೂ ರದ್ದಾಗಿರಬಹುದು. ಅಂತಹವರು ಅರ್ಜಿ ಸಲ್ಲಿಸಿದಲ್ಲಿ ಸರಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದೂ ಸಚಿವರು ಹೇಳಿದರು.
ಈ ಹಿಂದೆ ನಾನು ಆಹಾರ ಸಚಿವನಾಗಿದ್ದಾಗ ಡುಪ್ಲಿಕೇಟ್ ಕಾರ್ಡ್ ಸೇರಿದಂತೆ 20 ಲಕ್ಷ ಅನರ್ಹ ಕಾರ್ಡ್ ರದ್ದು ಮಾಡಿದ್ದೆ. ಅದೇ ವೇಳೆ 15 ಲಕ್ಷ ಹೊಸ ಕಾರ್ಡ್ ಕೊಟ್ಟಿದ್ದೆ ಎಂದವರು ಸಮರ್ಥಿಸಿಕೊಂಡರು.
ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಹಾಗೂ ಒಳ್ಳೆಯ ಆದಾಯ ಇರುವವರೂ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅಂತಹ ಕಾರ್ಡುಗಳನ್ನು ತೆಗೆಯಬೇಕಿದೆ ಎಂದರು.
ನಬಾರ್ಡ್ನಿಂದ ಕರ್ನಾಟಕಕ್ಕೆ ಬರುವ ಹಣ ಶೇ.58ರಷ್ಟು ಇಳಿಕೆ ಮಾಡಲಾಗಿದೆ. ರೈತರಿಗೆ ಅನುಕೂಲ ತರುವ ನಬಾರ್ಡ್ ಹಣವನ್ನು ಇಳಿಕೆ ಮಾಡಿರುವ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಬೇಕು ಎಂದವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕೊರೊನಾ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಆಗಿನ ಬಿಜೆಪಿ ಸರ್ಕಾರ ಲೂಟಿ ಮಾಡಿರುವುದು ಘೋರ ಅನ್ಯಾಯ. ಇದಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.