ರಾಣೇಬೆನ್ನೂರು, ನ. 19 – ರಾಜ್ಯದ ಮೊದಲನೆಯ ಹಾಗೂ ದೇಶದ ಎರಡನೇಯ ಸ್ಥಳೀಯ ಶ್ರೀ ಶನೇಶ್ವರ ಬಯಲು ಆಲಯದ ಅಷ್ಟಬಂಧ ಬ್ರಹ್ಮ ಕಲಶೋತ್ಸವ, ಮಹೋತ್ಸವದ ನಿಮಿತ್ತ್ಯ ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ರವಿವಾರ ದಿಂದ `ಅತಿರುದ್ರ ಮಹಾಯಾಗ’ವು ಭಕ್ತರ ಮಧ್ಯ ಭಕ್ತಿ ಪೂರ್ವಕವಾಗಿ ನೆರವೇರಿತು.
ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾ ಸ್ವಾಮೀಜಿ ಯಾಗದ ಸಾನ್ನಿಧ್ಯ ವಹಿಸಿ ಅತಿರುದ್ರ ಮಹಾಯಾಗವು ಮನುಷ್ಯನ ಬದುಕಿಗೆ ಸದಾ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುವುದು. ಈ ಯಾಗ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯ ಜೊತೆಗೆ ಆಯಸ್ಸು ಹೆಚ್ಚುತ್ತದೆ. ಪಾಪ, ಕರ್ಮಗಳು ದೂರವಾಗುತ್ತವೆ. ಪುಣ್ಯಗಳು ಅರಸಿಕೊಂಡು ಬರುತ್ತವೆ. ಸಂಪತ್ತು ಇಮ್ಮಡಿಗೊಳ್ಳುತ್ತದೆ ಎಂದರು.
ಅತಿರುದ್ಧ ಮಹಾಯಾಗವು ಬಹಳಷ್ಟು ಕಠಿಣವಾದ ವ್ರತವಾಗಿದೆ, ಭಕ್ತಿಯಿಂದ ಜಪ, ತಪ, ಪಾರಾಯಣ ಮಂತ್ರ ಘೋಷಣೆ ಮಾಡುವುದರಿಂದ ಮನುಜನಿಗೆ ಸದಾ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ಅನೇಕ ಪುರೋಹಿತರು, ಶಾಸ್ತ್ರಿಗಳು, ವಟುಗಳು ಮಹಾಯಾಗದ ನೇತೃತ್ವ ವಹಿಸಿದ್ದರು. ಇಂದಿನ ಪ್ರಥಮ ಮಹಾಯಾಗದಲ್ಲಿ ಹಿರೇಕೆರೂರು ಶಾಸಕ ಯು.ಬಿ. ಬಣಕಾರ ದಂಪತಿ ಸೇರಿದಂತೆ ಅನೇಕ ದಂಪತಿಗಳು ಯಾಗದಲ್ಲಿ ಭಾಗವಹಿಸಿದ್ದರು.