ಹರಿಹರ, ನ.19- ತಾಲ್ಲೂಕಿನಲ್ಲಿ 17 ವಕ್ಫ್ ಆಸ್ತಿಗಳು ಇವೆ ಎನ್ನುವ ಮಾಹಿತಿ ಹೊರಗಡೆ ಬಂದಿದ್ದು, ದಿನ ಕಳೆದಂತೆ ಈ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ ಎಂಬ ಭಯದ ವಾತಾವರಣದಲ್ಲಿ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಾದ್ಯಂತ ಲಕ್ಷಾಂತರ ಎಕರೆ ಭೂಮಿ ವಕ್ಫ್‌ಗೆ ಒಳಪಡುತ್ತದೆ ಎಂಬ ಗೊಂದಲಕ್ಕೆ ಸಿಲುಕಿದ್ದು, ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರೆ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವರದಿಯನ್ನು ಸಲ್ಲಿಸುವ ಮೂಲಕ ಕಾನೂನು ಬಿಗಿ ಮಾಡಿ, ವಕ್ಫ್‌ನಿಂದ ನೊಂದಂತಹ ರೈತರಿಗೆ ನ್ಯಾಯವನ್ನು ಕೊಡಿಸುವ ನಿಟ್ಟಿನಲ್ಲಿ ಹೋರಾಟವನ್ನು ಮಾಡಲಾಗುತ್ತದೆ ಎಂದು ಹರೀಶ್ ಹೇಳಿದರು.
ಇದೇ ದಿನಾಂಕ 25 ರಿಂದ ಬಸವನಗೌಡ ಪಾಟೀಲ್ ಯತ್ನಾಳ್ ಅವರ ನಾಯಕತ್ವದಲ್ಲಿ ಬೀದರ್‌ನಿಂದ ಹೋರಾಟವನ್ನು ಪ್ರಾರಂಭಿಸಲಾಗು ತ್ತಿದೆ. 26 ರಂದು ಗುಲಬರ್ಗಾ, 27 ರಾಯಚೂರು, 30 ಬಾಗಲಕೋಟೆ, ಬಿಜಾಪುರ, ಡಿಸೆಂಬರ್ 10 ರಂದು ಬೆಳಗಾವಿ ನಗರದಲ್ಲಿ ನಡೆಸಿ, ನಂತರ ಮೈಸೂರು, ಮಂಗಳೂರು ಭಾಗದಲ್ಲಿ ಮಾಡಿ ದಾವಣಗೆರೆ ನಗರದಲ್ಲಿ ಸಮಾರೋಪ ಸಮಾರಂಭ ಮಾಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಹರಿಹರ ತಾಲ್ಲೂಕಿನ 49215 ಬಿಪಿಎಲ್, 1790 ಎಪಿಎಲ್, 8 ಸಾವಿರ ಅಂತ್ಯೋದಯ ಕಾರ್ಡ್ ಇದ್ದು ಕಾಂಗ್ರೆಸ್ ಸರ್ಕಾರ 1800 ಬಿ.ಪಿ.ಎಲ್ ಕಾರ್ಡ್ ರದ್ದು ಪಡಿಸಿದ್ದು, ಅರ್ಹತೆ ಹೊಂದಿದವರನ್ನು ಬಿಟ್ಟು ಸಿಕ್ಕ ಸಿಕ್ಕವರ ಕಾರ್ಡ್‌ಗಳನ್ನು ರದ್ದು ಮಾಡುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.
ಎನ್.ಡಿ.ಎದವರು 100 ಕೋಟಿ ಹಣ ಕೊಟ್ಟು ನಮ್ಮ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಕಾಂಗ್ರೆಸ್ ಶಾಸಕ ಗಾಣಿಗ ರವಿಯವರೇ ಅದು ಶುದ್ಧ ಸುಳ್ಳು ಎಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಪಕ್ಷದ ವಿರುದ್ಧ ಆರೋಪಿಸಿದ 40 ಪರ್ಸೆಂಟ್ ಆರೋಪಕ್ಕೆ ಲೋಕಾ ಯುಕ್ತ ಕ್ಲೀನ್ ಚಿಟ್ ನೀಡಿದ್ದು, ಇದರಿಂದಾಗಿ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ ಎಂದು ಹೇಳಿದರು.
ತಮ್ಮ ಅವಧಿಯಲ್ಲಿ ಬಡವರಿಗೆ ಮನೆ ಕೊಟ್ಟಿಲ್ಲ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಸುಳ್ಳು ಹೇಳುತ್ತಿದ್ದಾರೆ. ನಗರಸಭೆ ಕಚೇರಿ ಮತ್ತು ತಾಪಂ ಇಓ ಕಚೇರಿಗೆ ಹೋಗಿ ದಾಖಲೆಗಳನ್ನು ಪಡೆದು ನಂತರ ತಮ್ಮ ಅವಧಿಯಲ್ಲಿ ಎಷ್ಟು ಮನೆ ನೀಡಲಾಗಿದೆ ಮತ್ತು ನನ್ನ ಅವಧಿಯಲ್ಲಿ ಎಷ್ಟು ವಿತರಣೆ ಆಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ಹನುಮಂತಪ್ಪ, ಜೆಡಿಎಸ್ ಪಕ್ಷದ ಮುಖಂಡರಾದ ಅಂಗಡಿ ಮಂಜುನಾಥ್, ಅಡಕಿ ಕುಮಾರ್, ಸುರೇಶ್ ಚಂದಪೂರ್, ಮೋಹನ್ ದುರಗೋಜಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ಹೆಚ್.ಮಂಜಾನಾಯ್ಕ್, ಬಾತಿ ಚಂದ್ರಶೇಖರ್, ಮಹಾಂತೇಶ್, ರಾಜು ರೋಖಡೆ, ವಿನಾಯಕ ಆರಾಧ್ಯ, ಶಿವರಾಜ್, ರೂಪ ಕಾಟ್ವೆ, ರೂಪ, ಸಾಕ್ಷಿ, ಇತರರು ಹಾಜರಿದ್ದರು.