ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮನವಿ
ಜಗಳೂರು, ನ. 19 – ಮಳೆರಾಯನ ಕೃಪೆ ಮತ್ತು ಕೆರೆ ತುಂಬಿಸುವ ಯೋಜನೆಗಳಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ಹಲವು ಕೆರೆಗಳು ತುಂಬಿದ್ದು ಬರಗಾಲದ ದಿನಗಳನ್ನು ನೆನಪಿನಲ್ಲಿ ಇಟ್ಟುಕೊಂಡು ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಮಂಗಳವಾರ ತಾಲ್ಲೂಕಿನ ಭರಮಸಮುದ್ರ ಕೆರೆಗೆ ಬಾಗಿನ ಅರ್ಪಿಸಿ, ನಂತರ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ದಶಕಗಳಿಂದ ಕೆರೆ ಕಟ್ಟೆಗಳು ಬರಿದಾಗಿದ್ದಲ್ಲಿ ಗಣೇಶ ವಿಸರ್ಜನೆಗೂ ನೀರಿಲ್ಲದೆ ಹರಸಾಹಸ ಪಡುವ ಸಂದರ್ಭಗಳು ಎದುರಾಗಿದ್ದವು. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆಯಡಿ ತುಂಗಭದ್ರೆ ಕೆರೆಗಳಿಗೆ ಹರಿದಿದ್ದಾಳೆ. ಕಾಕತಾಳೀಯ ಎಂಬಂತೆ ಹಿಂಗಾರು ವರುಣನ ಆರ್ಭಟಕ್ಕೆ ಕೆರೆಗಳು ಕೋಡಿ ಬಿದ್ದಿವೆ. ಜಲೋತ್ಸವದ ಸಂಭ್ರಮದಲ್ಲಿ ಮೈಮರೆಯದೇ ಸಾರ್ವಜನಿಕರು ಜಾಗೃತರಾಗಿರಬೇಕು. ಮಕ್ಕಳನ್ನು ನೀರಿನಿಂದ ದೂರವಿಡಿ’ ಎಂದು ಕಿವಿಮಾತು ಹೇಳಿದರು.
‘ಅಪ್ಪರ್ ಭದ್ರಾ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪಕ್ಷಾತೀತವಾಗಿ ವೀಕ್ಷಿಸಿ ನಂತರ ಚಳಿಗಾಲದ ಅಧಿವೇಶನಕ್ಕೂ ಮುನ್ನ ನಿಯೋಗ ತೆರಳಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಕೋಡಿ ಮೇಲಿನ ಜಂಗಲ್ ಕಟ್ಟಿಂಗ್ಸ್ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು, ಗ್ರಾಮಸ್ಥರ ಬೇಡಿಕೆಯಂತೆ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ವತಿಯಿಂದ ಮೊದಲ ಪ್ರಾಶಸ್ತ್ಯದಲ್ಲಿ 10 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ನನ್ನ ಆಡಳಿತಾವಧಿಯಲ್ಲಿ 57 ಕೆರೆ ತುಂಬಿಸುವ ಯೋಜನೆಯಡಿ ಭರಮ ಸಮುದ್ರ, ಬಿದರಕೆರೆ, ಜಮ್ಮಾಪುರ, ನಿಬಗೂರು, ಸಂಗೇನಹಳ್ಳಿ, ಕಾತ್ರಾಳು ಕೆರೆಗಳು ಕೈಬಿಟ್ಟಿದ್ದವು.ನಂತರ ಭರಮ ಸಮುದ್ರ, ನಿಬಗೂರು ಕೆರೆಗಳು ಸೇರ್ಪಡೆಗೊಳಿಸಲಾಗಿತ್ತು ಫಲವಾಗಿ ಇಂದು ಕೆರೆಕೋಡಿ ಬಿದ್ದಿದೆ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ 36000 ಕೆರೆಗಳಿದ್ದವು. ಕ್ರಮೇಣ ಅತಿ ಕ್ರಮಣಗೊಂಡು ಒತ್ತುವರಿಯಾಗಿ ಸಂಖ್ಯೆ ಕ್ಷೀಣಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಕನಸಿನ ಯೋಜನೆ ಧೀಮಂತ ರಾಜಕಾರಣಿಗಳ ಒತ್ತಡದಿಂದ ರೂಪುರೇಷೆ ಗೊಂಡಿದ್ದು. ಆಡಳಿತ ಸರ್ಕಾರಗಳು ಕೂಡಲೇ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಅಶ್ವಿನಿ ಅಂಜಿನಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ ಸದಸ್ಯ ಬಸವರಾಜ್, ಕೆರೆ ಸಮಿತಿ ಅಧ್ಯಕ್ಷ ಶಿವರುದ್ರಪ್ಪ, ಪ್ರಾಂಶುಪಾಲ ನಾಗಲಿಂಗಪ್ಪ, ರೈತ ಸಂಘಟನೆ ಮುಖಂಡ ಬಸವರಾಜಪ್ಪ, ಎಂ. ಕುಮಾರ್, ಜಿ.ಪಂ. ಮಾಜಿ ಸದಸ್ಯೆ ನಾಗರತ್ನಮ್ಮ, ಮುಖಂಡ ಬಿ. ಮಹೇಶ್ವರಪ್ಪ, ಮಹಾದೇವರೆಡ್ಡಿ, ಪ್ರಕಾಶ್ ರೆಡ್ಡಿ, ಸುರೇಶ್ ರೆಡ್ಡಿ, ಅಶ್ವತ್ಥರೆಡ್ಡಿ , ವಕೀಲ ಅರುಣ್ ಕುಮಾರ್ ಇದ್ದರು.