ಪಾಕಿಸ್ತಾನದ ಸೈನಿಕರನ್ನು ಬಂಧಿಸಿದ್ದ ದಿಟ್ಟ ಮಹಿಳೆ ಇಂದಿರಾ ಗಾಂಧಿ

ಪಾಕಿಸ್ತಾನದ ಸೈನಿಕರನ್ನು ಬಂಧಿಸಿದ್ದ ದಿಟ್ಟ ಮಹಿಳೆ ಇಂದಿರಾ ಗಾಂಧಿ

ಜಿಲ್ಲಾ ಕಾಂಗ್ರೆಸ್‍ನಿಂದ ನಡೆದ ಇಂದಿರಾ ಗಾಂಧಿ ಜನ್ಮದಿನಾಚರಣೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್.ಹೆಚ್. ನಾಗಭೂಷಣ್ ಶ್ಲ್ಯಾಘನೆ

ದಾವಣಗೆರೆ, ನ.19-  ಪಾಕಿಸ್ತಾನದ ಸಾವಿರಾರು ಸೈನಿಕರನ್ನು ಬಂಧಿಸಿದ್ದ ದಿಟ್ಟ ಉಕ್ಕಿನ ಮಹಿಳೆ ಇಂದಿರಾಗಾಂಧಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಆರ್.ಹೆಚ್.ನಾಗಭೂಷಣ್ ಶ್ಲ್ಯಾಘಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿ – ಡಾ. ಶಾಮನೂರು ಶಿವಶಂಕರಪ್ಪ ಭವನದಲ್ಲಿ ಇಂದು ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿರಾ ಅವರು 1971ರಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡುವ ಮೂಲಕ ವಿಪಕ್ಷಗಳ ಕೈಯಲ್ಲೂ ಭೇಷ್‌ ಎನಿಸಿಕೊಂಡರು ಇಂದಿರಾ, ಅವರ ನೆರವಿನಿಂದಾಗಿ ಪೂರ್ವ ಪಾಕಿಸ್ತಾನ ಅಂದರೆ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಪಾಕಿಸ್ತಾನದ ಮೇಲೆ ಯುದ್ದ ಮಾಡಿ 1 ಲಕ್ಷ ಪಾಕ್ ಸೈನಿಕರನ್ನು ಸೆರೆಹಿಡಿದು, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದರು. ಆ ಸಂದರ್ಭದಲ್ಲಿ ಬಿಜೆಪಿಯ ಅಗ್ರಗಣ್ಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿಯವರು ಇಂದಿರಾ ಗಾಂಧಿಯವರನ್ನು ದುರ್ಗೆ ಎಂದು ಹೊಗಳಿದ್ದರು ಎಂದು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಯೊಬ್ಬಳು ದೇಶದ ಉನ್ನತ ಸ್ಥಾನಕ್ಕೇರಿದ್ದು ನಮ್ಮ ಪ್ರಜಾಪ್ರಭುತ್ವದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಇಂದಿರಾಗೆ ರಾಜಕೀಯ ಹಿನ್ನೆಲೆ ಮತ್ತು ಪ್ರಭಾವಗಳೆರಡೂ ಇದ್ದವು ಎಂದರು.

ಇಂದಿರಾ ಗಾಂಧಿ ಅವರ ಒಟ್ಟು ಆಡಳಿತಾವಧಿ ಯಲ್ಲಿ 1969ರಲ್ಲಿ ಒಟ್ಟು 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ, ದೇಶದ ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದರು. ಇದರ ಒಟ್ಟು ಪ್ರತಿಫಲ 80ರ ದಶಕದಲ್ಲಿ ನಿಚ್ಚಳವಾಗಿ ಕಾಣಲಾರಂಭಿಸಿದರೆ, ಈಗ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಪೂರ್ಣ ಪ್ರಮಾಣದ ಪ್ರತಿಫಲ ಕಾಣುತ್ತಿದೆ ಎಂದರು.

ಮಹಿಳಾ ಕಾಂಗ್ರೆಸ್‍ನ ಅನಿತಾಬಾಯಿ ಮಾಲತೇಶ್, ಮಂಜಮ್ಮ, ಮಂಗಳಮ್ಮ ಮಾತನಾಡಿ, ದೇಶ ಕಂಡ ಧೀಮಂತ ನಾಯಕಿ ಇಂದಿರಾ ಗಾಂಧಿ ಕಾಲವಾಗಿ ಅನೇಕ ದಶಕಗಳೇ ಕಳೆದರೂ ಈಗಲೂ ಅವರ ಹೆಸರು ಪ್ರಸ್ತಾಪ ಆಗುತ್ತಲೇ ಇರುತ್ತದೆ. ಅದೇ ಅವರ ಸಾಧನೆಗೆ, ವ್ಯಕ್ತಿತ್ವಕ್ಕೆ ಸಾಕ್ಷಿ. ಜನಪರ ರಾಜಕಾರಣದಿಂದ ಹಾಗೂ ರಾಷ್ಟ್ರ ಕೇಂದ್ರೀಕೃತ ನೀತಿಗಳಿಂದ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯಾಗಿ ಭಾರತದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.

ಶ್ರೀಮತಿ ಉಮಾ ಕುಮಾರ್, ಕೇರಂ ಗಣೇಶ್, ಸಾಗರ್ ಎಂ.ಹೆಚ್., ಅಕ್ಬರ್, ಯುವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!