ಹರಿಹರ, ನ. 18- ನಗರದ ಡಿ.ಆರ್.ಎಂ. ಪ್ರೌಢಶಾಲಾ ಕಾಂಪೌಂಡ್ ಗೋಡೆಯ ಕಟ್ಟಡ ನಿರ್ಮಾಣದ ಕಾಮಗಾರಿಗೆ ಎರಡು ಬಾರಿ ಗುದ್ದಲಿ ಪೂಜೆ ಸಲ್ಲಿಸಿದ ಘಟನೆ ನಗರದಲ್ಲಿ ನಡೆಯಿತು.
ನಗರದ ಡಿ.ಆರ್.ಎಂ. ಪ್ರೌಢಶಾಲಾ ಕಾಂಪೌಂಡ್ ಗೋಡೆಯ ನಿರ್ಮಾಣ ಮಾಡುವುದಕ್ಕೆ ಶಾಲಾ ಆಡಳಿತ ಮಂಡಳಿಯವರು ಕಾರ್ಗಿಲ್ ಕಂಪನಿಯಯವರಿಗೆ ಅರ್ಜಿ ಸಲ್ಲಿಸಿದ ಪರಿಣಾಮ ಇಂದು ಬೆಳಗ್ಗೆ ಕಾರ್ಗಿಲ್ ಕಂಪನಿಯ ವತಿಯಿಂದ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಶಾಲೆ ಕಾಂಪೌಂಡ್ ಗೋಡೆಯ ನಿರ್ಮಾಣದ ಗುದ್ದಲಿ ಪೂಜೆಯನ್ನು ಶಾಸಕ ಬಿ.ಪಿ. ಹರೀಶ್ ನೆರವೇರಿಸಿ ಸ್ಥಳದಿಂದ ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಕಾರ್ಗಿಲ್ ಕಂಪನಿಯ ಅಧಿಕಾರಿ ಕವನ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಬೀವುಲ್ಲಾ, ಶಿಕ್ಷಣ ಇಲಾಖೆ ಕೃಷ್ಣಪ್ಪ, ಬಸವರಾಜಯ್ಯ, ಶಿಕ್ಷಕರ ಸಂಘದ ಈಶಪ್ಪ ಬೂದಿಹಾಳ್, ಸಿದ್ಧರಾಮೇಶ್, ವಿನಾಯಕ ಆರಾಧ್ಯಮಠ್, ಶಿವರಾಜ್ ಹಾಜರಿದ್ದರು.
ಅದೇ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಆಗಮಿಸಿದ್ದಾರೆ. ಈ ವೇಳೆ ಶಾಲೆ ಮುಖ್ಯ ಶಿಕ್ಷಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮತ್ತು ಸ್ಥಳದಲ್ಲಿ ಹಾಜರಿದ್ದ ಕಾರ್ಗಿಲ್ ಕಂಪನಿಯ ಅಧಿಕಾರಿಗಳು ನಂದಿಗಾವಿ ಶ್ರೀನಿವಾಸ್ ರವರಿಂದ ಮತ್ತೊಮ್ಮೆ ಗುದ್ದಲಿ ಪೂಜೆ ಮೂಲಕ ಕಾಮಗಾರಿ ಆರಂಭ ಮಾಡಿದ ಘಟನೆ ನಡೆದದ್ದು, ಒಂದೇ ಕಾಮಗಾರಿಗೆ ಎರಡು ಬಾರಿ ಗುದ್ದಲಿ ಪೂಜೆ ಮಾಡಿದ್ದರಿಂದ ಸ್ಥಳೀಯರಲ್ಲಿ ಮುಜಗರ ತಂದಿದೆ.