ಪ್ರಾಚೀನ ಕಲೆಯಾದ ಬಯಲಾಟ ಉಳಿಸಿ, ಬೆಳೆಸಬೇಕಿದೆ

ಪ್ರಾಚೀನ ಕಲೆಯಾದ ಬಯಲಾಟ ಉಳಿಸಿ, ಬೆಳೆಸಬೇಕಿದೆ

ಹರಪನಹಳ್ಳಿ: ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿಗಳು 

ಹರಪನಹಳ್ಳಿ, ನ.17- ಪ್ರಾಚೀನ ಕಲೆಯಾದ ಬಯಲಾಟವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ  ಶ್ರಿ ಚನ್ನಬಸವ ಶಿವಯೋಗಿಗಳು ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗೌರಿ ಹುಣ್ಣಿಮೆ ಹಬ್ಬ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ್ಯ ಡಾ. ಅಂಬೇಡ್ಕರ್ ಸಮಾಜದ ಅಧ್ಯಕ್ಷ  ಭೀಮಪ್ಪ ನಿಚ್ಚವ್ವನಹಳ್ಳಿ ಇವರ ಸಾರಥ್ಯದಲ್ಲಿ `ಪಾಂಡು ವಿಜಯ ಅರ್ಥತ್ ಕೀಚಕನ ವಧೆ’ ಎಂಬ ಬಯಲಾಟ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಯಲಾಟ ರಾಜ್ಯದ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡು ಕಲೆ. ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ  ಕಾಲದಿದಲೂ ಗ್ರಾಮೀಣರಿಗೆ  ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟವಾಗಿದೆ ಎಂದರು. ನಮ್ಮ ಪೂರ್ವಜರು ತಾವಾಡುವ ಭಾಷೆಯಲ್ಲೇ ಕಟ್ಟಿ ಉಳಿಸಿಕೊಂಡು ಬಂದಿರುವ ಸಾಹಿತ್ಯ ಸಂಪನ್ಮೂಲ ಅದುವೇ ಜನಪದ ಸಾಹಿತ್ಯ. ಅದೊಂದು ಮೌಖಿಕ ಪರಂಪರೆಯ ಅಭಿವ್ಯಕ್ತ ರೂಪವಾಗಿದೆ. ಇಂದಿನ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಕಲೆಯ ಮೂಲಕ ಪುರಾತನ ಇತಿಹಾಸದ ದೊಡ್ಡಾಟ, ಬಯಲಾಟ ಕಲೆಗಳು ನಿರ್ಲಕ್ಷಕ್ಕೆ ಒಳಗಾಗುತ್ತಿವೆ ಎಂದು ವಿಷಾದಿಸಿದರು.

ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಯಲಾಟ-ಜನಪದ ಕಲೆಗಳಲ್ಲಿಯೇ ‘ಗಂಡು ಕಲೆ’. ಇದು ಗ್ರಾಮೀಣರ ಮನರಂಜನೆಯ ಭಾಗವೂ ಹೌದು. ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಬಯಲಾಟ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು ಬಯಲಾಟವನ್ನು ಉಳಿಸಿ ಬೆಳಸುವ ಕೆಲಸವಾಗಬೇಕು ಎಂದರು.

ಬಾಗಲಕೋಟೆಯ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.  ಡಾ. ದುರ್ಗಾದಾಸ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಆಧುನೀಕರಣದ ಭರಾಟೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ದೊಡ್ಡಾಟ, ಬಯಲಾಟಗಳಂತಹ ರಂಗ ಕಲೆಗಳು ನಶಿಸಿ ಹೋಗುತ್ತಿರುವುದು ದುರ್ದೈವದ ಸಂಗತಿ ಎಂದರು. 

ದಾವಣಗೆರೆ ಕಲಾವಿದರ ಸಂಘದ ಅಧ್ಯಕ್ಷ ಎನ್.ಎಸ್ ರಾಜಣ್ಣ, ಬಾಗಲಕೋಟಯ ಸಹಾಯಕ ಕೃಷಿ ಅಧಿಕಾರಿ ಶಂಕರ್ ಗಸ್ತಿ, ಹಗರಿಬೊಮ್ಮನಹಳ್ಳಿ ಕಲಾವಿದ ರಸಂಘದ ಅಧ್ಯಕ್ಷ ರಮೇಶ ಹಂಚಿನಮನಿ, ನ್ಯಾಯವಾದಿ ಉಮಾಶಂಕರ್, ಭಾಗವತರಾದ ಕೆ.ಬಿ. ಷಣ್ಮುಖಪ್ಪ, ಕೆ.ಬಿ.ನರಸಿಂಹಪ್ಪ, ಎ.ನೂರಸಾಹೇಬ್, ಮುಖಂಡರಾದ ಎಚ್.ಎನ್ ಪರಸನಾಯ್ಕ ಸೇರಿದಂತೆ ಇತರರು ಇದ್ದರು.

error: Content is protected !!