ಶೀಘ್ರ ಕಾರ್ಯಾರಂಭ: ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು, ನ.17- ದೇಶೀಯ ಕ್ರೀಡೆ ಅದರಲ್ಲೂ ಕುಸ್ತಿಗೆ ಅತೀ ಹೆಚ್ಚು ಆಸಕ್ತಿ ಹೊಂದಿದ್ದ ನಮ್ಮ ಹಿರಿಯರು ಬಹಳಷ್ಟು ಆರೋಗ್ಯವಂತ ರಾಗಿದ್ದರು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು. ಜೊತೆಗೆ ಕುಸ್ತಿಪಟುಗಳೂ ಮೈಸೂರು ಮಹಾ ರಾಜರಿಂದ ಸನ್ಮಾನಿತ ರಾಗಿದ್ದರು. ಆ ದಿಶೆಯಲ್ಲಿ ಇಂದಿನ ನಮ್ಮ ಯುವ ಸಮುದಾಯ ಶಿಕ್ಷಣದ ಜೊತೆಗೆ ಆರೋಗ್ಯಕರ ಕ್ರೀಡೆಗಳಲ್ಲೂ ಆಸಕ್ತಿ ವಹಿಸಲಿ ಎಂದು ಅವರು ಸಲಹೆ ನೀಡಿದರು.
ರಾಣೇಬೆನ್ನೂರು ನಗರ ಹಾಗೂ ಮೆಡ್ಲೇರಿಗಳಲ್ಲಿ ಗರಡಿ ಮನೆಗಳ ನಿರ್ಮಾಣಕ್ಕೆ ನನ್ನ ಅನುದಾನದಲ್ಲಿ ಒಂದು ಕೋಟಿ ಹಣ ನೀಡಿದ್ದೇನೆ. ಶೀಘ್ರದಲ್ಲಿಯೇ ಕಾರ್ಯಾರಂಭವಾಗಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಇಂದು ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ತಿಳಿಸಿದರು.