ಪುಸ್ತಕ ಓದುವ ಹವ್ಯಾಸದಿಂದ ಶಾಲೆ, ಸಮಾಜ ಸುಧಾರಣೆ ಸಾಧ್ಯ

ಪುಸ್ತಕ ಓದುವ ಹವ್ಯಾಸದಿಂದ ಶಾಲೆ, ಸಮಾಜ ಸುಧಾರಣೆ ಸಾಧ್ಯ

ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರ ಕೃತಿ, ವಚನ ಸ್ಪಂದನ ಲೋಕಾರ್ಪಣೆಯಲ್ಲಿ ಹಿರಿಯ ರಾಜಕೀಯ ಧುರೀಣ ಹೊಳಸಿರಿಗೆರೆ ನಾಗನಗೌಡ್ರು ಅಭಿಮತ

ಹರಿಹರ, ನ. 17 –  ಪುಸ್ತಕ ಓದುವ ಹವ್ಯಾಸದಿಂದ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಹೊಂದುವುದರಿಂದ ಶಾಲೆಗಳು ಮತ್ತು ಸಮಾಜ ಬದಲಾವಣೆ ಆಗುತ್ತದೆ ಎಂದು  ಹಿರಿಯ ರಾಜಕೀಯ ಧುರೀಣ ಹೊಳಸಿರಿಗೆರೆ ನಾಗನಗೌಡ್ರು ಅಭಿಪ್ರಾಯಪಟ್ಟರು.  

ನಗರದ ಎಸ್.ಜೆ.ವಿ.ಪಿ. ಕಾಲೇಜು ಜಿ.ಎಂ. ಬಸವರಾಜ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಪರಸ್ಪರ ಬಳಗ, ಕರ್ನಾಟಕ ಜಾನಪದ ಪರಿಷತ್ತು ಮತ್ತು ಸಾಹಿತ್ಯ ಸಂಗಮ ಇವರ ಸಹಯೋಗದಲ್ಲಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರ ಕೃತಿ, ವಚನ ಸ್ಪಂದನ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ಕೈಯಲ್ಲಿ ದೇಶ ಮತ್ತು ರಾಜ್ಯವನ್ನು ಬದಲಾವಣೆ ತರುವುದಕ್ಕೆ ಆಗದೇ ಹೋದರೆ ನಮ್ಮ ಜೀವನದಲ್ಲಿ ಕೆಲವೊಂದು ಉತ್ತಮ ಹವ್ಯಾಸವನ್ನು ಹೊಂದುವ ಮೂಲಕ ಸಮಾಜವನ್ನು ಸುಧಾರಣೆ ತರುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಿದಾಗ ಸಮಾಜ ಸುಧಾರಣೆ ತರಬಹುದು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯುವಕರಲ್ಲಿ ಸಾಹಿತ್ಯವನ್ನು ಬೆಳೆಸಿ ಉಳಿಸುವಂತಹ ಕೆಲಸ ಆಗಬೇಕಿದೆ ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಉಪಾಧ್ಯಕ್ಷ  ಕೆ.ಎಂ‌. ವೀರೇಶ್ ಮಾತನಾಡಿ,  ಹಿಂದಿನ ಕಾಲದಿಂದಲೂ ರಚಿತವಾದ ವಚನಗಳು ಎಲ್ಲಾ ವರ್ಗದ ಜನತೆಯ ಸನ್ಮಾರ್ಗಕ್ಕೆ ದಾರಿಯಾಗಿದ್ದು, ಅವುಗಳನ್ನು ರಚಿಸಿದ ಬಸವಣ್ಣನವರೂ, ಸೇರಿದಂತೆ, ಅನೇಕ ದಾರ್ಶನಿಕರು ತಮ್ಮ ವಚನಗಳಿಂದ ನಾಡಿನಾದ್ಯಂತ ಪ್ರಚಲಿತರಾಗಿದ್ದಾರೆ.

ಅಷ್ಟೊಂದು ಶಕ್ತಿ ವಚನಗಳಲ್ಲಿದೆ. ಆದ್ದರಿಂದ ಬಹಳಷ್ಟು ವಿದ್ವತ್ತು ಮತ್ತು ಸಾಹಿತ್ಯವನ್ನು ಒಳಗೊಂಡಂತೆ ಅಂಶಗಳನ್ನು ವಚನ ಸ್ಪಂದನ ಪುಸ್ತಕಗಳಲ್ಲಿ ಪ್ರಕಟಿಸಿದ ಕಾರ್ಯ ಶ್ಲ್ಯಾಘನೀಯ ಕಾರ್ಯವಾಗಿದೆ.   ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್‌ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ ಮಾತನಾಡಿ ಪ್ರೊ ಭಿಕ್ಷಾವರ್ತಿಮಠ ಅವರು ಶಿಕ್ಷಣ, ಕಲೆ, ಸಾಹಿತ್ಯ, ನಾಟಕ ಸಮಾಜದ ಎಲ್ಲಾ ರಂಗದಲ್ಲಿ ತೊಡಗಿಸಿಕೊಂಡು, ಬಹಳ ವಿಭಿನ್ನವಾಗಿ ಸಮಾಜದಲ್ಲಿ ಗುರುತಿಸಿಕೊಂಡ ಶ್ರೇಷ್ಠ ಪ್ರಾಧ್ಯಾಪಕರಾಗಿದ್ದಾರೆ ಎಂದರು.

 ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, ಪುಸ್ತಕ ಮತ್ತು ಕವಿತೆಗಳು ರಚಿಸಿದ ನಂತರ ಓದುಗರ ಸ್ವತ್ತು ಆಗಬೇಕು. ಆಗ ಅದಕ್ಕೆ ಹೆಚ್ಚಿನ ಮಾನ್ಯತೆ ಪಡೆಯುತ್ತದೆ. ಪುಸ್ತಕಗಳ ಸಂಗಾತಿ ಆದರೆ ಸಮಾಜದಲ್ಲಿ ನಡೆಯುವ ವಿಚಾರಗಳ ಬಗ್ಗೆ ತಿಳಿಯುವುದಕ್ಕೆ ಸಹಕಾರಿ ಆಗುತ್ತದೆ ಎಂದು ಹೇಳಿದರು.

ಪುಸ್ತಕ ಕುರಿತು ಸಾಹಿತ್ಯ ವಿಮರ್ಶಕರು ಪ್ರೊ ಲಿಂಗಾರಾಜ್ ಕಮ್ಮಾರ್ ಮಾತನಾಡಿ,  ಶಾಯಿರಿ ಕವಿ ಎಂದೇ ಹೆಸರಾದ ಭಿಕ್ಷಾವರ್ತಿಮಠ ಅವರು ಚುಟುಕು ಕವನಗಳನ್ನು, ಭಾವಗೀತೆಗಳನ್ನು ಬರೆಯುತ್ತಾ, ಹೊಸ ಅಭಿವ್ಯಕ್ತಿಯ ಮಾರ್ಗವನ್ನು ಹುಡುಕುತ್ತಾ ಈಗ ಆಧುನಿಕ ವಚನಗಳ ಬರಹದಲ್ಲಿ ಪಕ್ವತೆಯನ್ನು ಕಂಡುಕೊಂಡಿದ್ದಾರೆ ಎಂದು ಪ್ರಶಂಸಿಸಿದರು.

ನಿವೃತ್ತ ಪ್ರಾಂಶುಪಾಲ ಡಾ. ಎಸ್.ಹೆಚ್. ಪ್ಯಾಟಿ ಮಾತನಾಡಿ, ಪತ್ರಿಕೆ, ಪುಸ್ತಕ ಮತ್ತೊಂದು ಸಾರಿ ನೋಡಲಿಕ್ಕೆ ಅವಕಾಶ ಇರುತ್ತದೆ. ಹಾಗಾಗಿ ಅದು ದಾಖಲೆಯಾಗಿ ಉಳಿಯಲು ಸಾಧ್ಯತೆ ಇದೆ ಎಂದು ಹೇಳಿದರು. 

ವಚನ ಸ್ಪಂದನ ಕೃತಿ ರಚಿಸಿರುವ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ಕನ್ನಡ ಭಾಷೆಯ ಫೌಂಡೇಶನ್ ಇಲ್ಲದೆ ಹೋದರೆ ಕನ್ನಡದ ಜ್ಞಾನ ಕೊರತೆ ಆಗುತ್ತದೆ. ದಾಸ ಮತ್ತು ವಚನ ಸಾಹಿತ್ಯ ಬಹುತ್ವದ ಬದುಕನ್ನು ಕಟ್ಟಿಕೊಡುತ್ತದೆ. 

ಜಿಡ್ಡು ಬಿಟ್ಟು ಬದುಕನ್ನು ಅರಳಿಸುವಂತಹ ಸಮಾಜ ಸುಧಾರಣೆಯ ಅಂಶಗಳನ್ನು ಸಮಾಜಕ್ಕೆ ಕೊಡಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಪ್ರೊಫೆಸರ್ ಹಿರಿಯ ಸಾಹಿತಿ ಸಿ.ವಿ ಪಾಟೀಲ್ ವಹಿಸಿದ್ದರು.  ಧರ್ಮಸ್ಥಳ ಸಂಘದ ಮೃತ್ಯುಂಜಯ ಅವರು ಪ್ರೊ. ಭಿಕ್ಷಾವರ್ತಿಮಠ  ಅವರ ಪರಿಚಯ ಓದಿದರು. 

ಹೆಚ್.ಕೆ. ಕೊಟ್ರಪ್ಪ, ಜೆ. ಕಲಿಂ ಬಾಷಾ ಮಾತನಾಡಿದರು. ಈ ಸಂದರ್ಭದಲ್ಲಿ  ಡಿ.ಎಂ. ಅಂಗಡಿ ದಾವಣಗೆರೆ, ಮಾನ್ಯತಾ ವಿದ್ಯಾಸಂಸ್ಥೆ ನಾಡಗೌಡ್ರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಬಿ. ರೇವಣ್ಣನಾಯ್ಕ್, ಎಂ. ಚಿದಾನಂದ ಕಂಚಿಕೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎನ್.ಎಲ್. ಪ್ರಕಾಶ್,  ಸದಸ್ಯ ಎ. ರೀಯಾಜ್ ಆಹ್ಮದ್,  ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ, ಕಾರ್ಯದರ್ಶಿ ಎನ್.ಇ. ಸುರೇಶ್, ಶೇಖರಗೌಡ ಪಾಟೀಲ್, ಟಿ. ಇನಾಯತ್ ಉಲ್ಲಾ, ಆರ್. ಮಂಜುನಾಥ್, ಟಿ. ಪಂಚಾಕ್ಷರಿ  ಬಿ. ಮುಗ್ದಂ, ರತ್ನಮ್ಮ ಸಾಲಿಮಠ. ಇತರರು ಹಾಜರಿದ್ದರು,    

ಪ್ರಾರ್ಥನೆ, ಗೌರಿ ವಿ‌.ಬಿ. ಕೊಟ್ರೇಶ್ , ಪರಮೇಶ್ವರಪ್ಪ ಕತ್ತಿಗೆ ಹಾಡಿದರು. ಸ್ವಾಗತ ರಿಯಾಜ್ ಆಹ್ಮದ್, ನಿರೂಪಣೆ ಬಿ.ಬಿ. ರೇವಣ್ಣನಾಯ್ಕ್, ವಂದನಾರ್ಪಣೆ ವಿ.ಬಿ. ಕೊಟ್ರೇಶ್ ಮಾಡಿದರು. 

error: Content is protected !!