ಕ್ವಿಂಟಾಲ್ ಒಂದಕ್ಕೆ ರೂ.2920 ದರದಂತೆ ಭತ್ತ ಖರೀದಿಸಲು ರೈತ ಒಕ್ಕೂಟದ ಆಗ್ರಹ

ಕ್ವಿಂಟಾಲ್ ಒಂದಕ್ಕೆ ರೂ.2920 ದರದಂತೆ  ಭತ್ತ ಖರೀದಿಸಲು ರೈತ ಒಕ್ಕೂಟದ ಆಗ್ರಹ

ದಾವಣಗೆರೆ, ನ.17- ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತ ಬೆಳೆ ಬೆಳೆಯಲಾಗಿದ್ದು, ಕೊಯ್ಲು ಪ್ರಾರಂಭವಾಗಿದೆ. ಕಳೆದ ಬೇಸಿಗೆ ಹಂಗಾಮಿನಲ್ಲಿ ಮಳೆ ಇಲ್ಲದೆ ತೀವ್ರ ಬರ ಇದ್ದ ಕಾರಣದಿಂದ ರೈತರು ಬೆಳೆ ಬೆಳೆಯದೆ ಜಮೀನುಗಳನ್ನು ಬೀಳು ಬಿಟ್ಟಿದ್ದರು. ಹೀಗಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. 

ಈ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಭದ್ರಾ ಡ್ಯಾಂ ತುಂಬಿತ್ತು. ಬೆಳೆಯು ಚೆನ್ನಾಗಿರುವುದರಿಂದ ಜಿಲ್ಲೆಯಲ್ಲಿ 4.5 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪನ್ನವಾಗುವ ನಿರೀಕ್ಷೆ ಇದೆ. ಆದರೆ ಭತ್ತದ ಖರೀದಿದಾರರ ಒಳಸಂಚಿನಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲ. ಕ್ವಿಂಟಾಲ್ ಒಂದಕ್ಕೆ ರೂ.2500 ರಿಂದ ರೂ.2650 ರವರೆಗೆ ಭತ್ತದ ಧಾರಣೆ ನಡೆದಿದೆ. ಕಳೆದ ಬಾರಿ ತೀವ್ರ ಬರದಿಂದ ಬೆಳೆ ಬೆಳೆಯದೆ. ತತ್ತರಿಸಿದ್ದ ರೈತರು ಈಗಲಾದರೂ ಉತ್ತಮ ಬೆಳೆ ಇದೆ ಆದರೆ ಉತ್ತಮ ಬೆಲೆ ಇಲ್ಲದೆ ರೋಸಿ ಹೋಗಿದ್ದಾರೆ. ಆದ್ದರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಬೇಕು ಎಂದು ವಿವಿಧ ಬೇಡಿಕೆಗಳೊಂದಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ರೈತ   ಒಕ್ಕೂಟ ಮನವಿ ಸಲ್ಲಿಸಿದೆ. 

ತಕ್ಷಣ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್ ಒಂದಕ್ಕೆ ರೂ.2320 ದರ ನಿಗದಿಯಾಗಿದೆ. ಇದು ರೈತನ ಶ್ರಮಕ್ಕೆ ತಕ್ಕದ್ದಲ್ಲವಾಗಿದೆ. ಆದ್ದರಿಂದ ಕನಿಷ್ಠ ಬೆಂಬಲ ಬೆಲೆ ರೂ.2320 ರ ಜೊತೆಗೆ ರೂ.600 ಪ್ರೋತ್ಸಾಹ ಧನ ಸೇರಿಸಿ, ಕ್ವಿಂಟಲ್ ಒಂದಕ್ಕೆ ರೂ.2920 ರಂತೆ ಖರೀದಿಸಬೇಕು. 

ರೈತ ಒಕ್ಕೂಟದ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಯವರು ತಕ್ಷಣವೇ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಮಂಡಿಯಲ್ಲಿ ಪ್ರತಿ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ನಡೆಯುವಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು. ದಲಾಲಿ, ತೂಕದಲ್ಲಿ ವಂಚನೆ, ತಳಗಾಳು ಪಡೆಯುವುದು ನಿಯಮಬಾಹಿರ. ಇವುಗಳನ್ನು ನಿಯಂತ್ರಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಒಕ್ಕೂಟದ ಮುಖಂಡರುಗಳಾದ ಕೊಳೇನಹಳ್ಳಿ ಬಿ. ಎಂ. ಸತೀಶ್, ಬೆಳವನೂರು ನಾಗೇಶ್ವರರಾವ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಮಾಜಿ ಮೇಯರ್ ಹೆಚ್.ಎನ್. ಗುರುನಾಥ್, ಮಹಾನಗರಪಾಲಿಕೆ ಮಾಜಿ ಸದಸ್ಯ ಹೆಚ್. ಎನ್. ಶಿವಕುಮಾರ್, ಆರನೇ ಕಲ್ಲು ವಿಜಯಕುಮಾರ್, ಕಬ್ಬೂರು ಶಿವಕುಮಾರ್, ಕುಂದುವಾಡದ ಪುನೀತ್, ಮಹೇಶಪ್ಪ, ಜಿಮ್ಮಿ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!