ದಾವಣಗೆರೆ, ನ.17- ವಕ್ಫ್ ಕಬಳಿಸಿದ ಪಿ.ಜೆ. ಬಡಾವಣೆಯ 4 ಎಕರೆ 13 ಗುಂಟೆ ಜಾಗವನ್ನು ರಾಜ್ಯ ಸರ್ಕಾರ ಕಾನೂನು ಬದ್ಧವಾಗಿ ಪಹಣಿಯಲ್ಲಿನ ವಕ್ಫ್ ಹೆಸರು ರದ್ದು ಪಡಿಸಲು ಕ್ರಮ ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶನಿವಾರ ಸಂಜೆ ಶ್ರೀರಾಮ ಮಂದಿರದ ಆವರಣದಲ್ಲಿ ಪಿ.ಜೆ. ಬಡಾವಣೆಯ 4.13 ಎಕರೆ ಜಮೀನು ವಕ್ಫ್ ಕಬಳಿಕೆ ವಿಚಾರವಾಗಿ ತಹಶೀಲ್ದಾರ್ ಡಾ. ಅಶ್ವತ್ಥ್ ಮತ್ತು ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಸ್ವತಃ ಅವರೇ ಖುದ್ದಾಗಿ ಸಭೆಯಲ್ಲಿ ಪಾಲ್ಗೊಳ್ಳಬಹುದಿತ್ತು. ಆದರೆ ಇದೊಂದು ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದರು.
ಈಗಾಗಲೇ 1987ರಲ್ಲಿ ಈ ಜಾಗವನ್ನು ಅಂದಿನ ಕಂದಾಯ ಅಧಿಕಾರಿಗಳು ಖಬರಸ್ಥಾನ ಎಂದು ನಮೂದಿಸಿದ್ದಾರೆ ಎಂಬುದು ದಾಖಲೆಗಳಲ್ಲಿ ಉಲ್ಲೇಖವಿದ್ದರೂ ಸಹ ಇದು ಬಿಜೆಪಿ ವಿರುದ್ಧ ಆರೋಪ ಮಾಡಲಾಗಿದೆ. ನಾವು ಇದನ್ನು ಸಹಿಸುವುದಿಲ್ಲ ಎಂದರು.
ಪಿ.ಜೆ ಬಡಾವಣೆಯ ವಕ್ಫ್ ವಿವಾದಕ್ಕೆ ಬಿಜೆಪಿಯೇ ನೇರಹೊಣೆ ಎಂದು ಹೇಳಿಕೆ ನೀಡಿರುವ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ದಾಖಲೆ ಸಮೇತ ಅದನ್ನು ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ರಾಜ್ಯಸರ್ಕಾರ ಕೂಡಲೇ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ರದ್ಧು ಪಡಿಸಲು ಸಿದ್ಧವಾಗಬೇಕು. ಇಲ್ಲವಾದರೆ ಬಿಜೆಪಿಯಿಂದ ‘ರಕ್ತಕೊಟ್ಟೆವು, ಭೂಮಿ ಬಿಡೆವು’ ಘೋಷಣೆ ಅಡಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಎಚ್ಚರಿಸಿದರು.
ಬಿಜೆಪಿ ವಕೀಲರ ಪ್ರಕೋಷ್ಠದ ರವಿಕುಮಾರ್ ಮಾತನಾಡಿ, 1995ರ ವಕ್ಫ್ ಕಾಯ್ದೆ ಪ್ರಕಾರ ವಕ್ಫ್ ಯಾವುದೇ ಜಾಗವನ್ನು ತನ್ನದೆಂದು ಪರಭಾರೆ ಮಾಡಿಕೊಳ್ಳಲು ಹಕ್ಕು ನೀಡಲಾಗಿದೆ. ಒಂದು ವೇಳೆ ಆ ಜಾಗ ಜನಸಾಮಾನ್ಯರಿಗೆ, ಮಠಮಾನ್ಯ ಹಾಗೂ ದೇವಾಲಯಗಳಿಗೆ ಸೇರಿದ್ದಾದರೆ ದಾಖಲೆ ಸಮೇತ ಅದನ್ನು ಕಾನೂನಾತ್ಮ ಹೋರಾಟ ನಡೆಸಿಯೇ ಪಡೆದುಕೊಳ್ಳಬೇಕು. ಆದರೆ, ವಕ್ಫ್ ಯಾವುದೇ ದಾಖಲೆ ನೀಡದಿದ್ದರೂ ಆ ಜಾಗವನ್ನು ಪರಭಾರೆ ಮಾಡಿಕೊಳ್ಳಲು ಅವಕಾಶವಿದೆ. ಇದು ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ತಿದ್ದುಪಡಿಯಾಗಿದೆ ಎಂದು ಮಾಹಿತಿ ನೀಡಿದರು.
ಪಿ.ಜೆ ಬಡಾವಣೆಯ ಸರ್ವೇ ನಂ. 53ಕೂಡ 1962ರಲ್ಲಿ ಸರ್ಕಾರಿ ಸ್ವಾಧೀನಕ್ಕೆ ಒಳಪಟ್ಟಿದೆ ಎಂದು ಸ್ಪಷ್ಟವಾಗಿದೆ. ಈ ಜಾಗ ಬೀರದೇವರ ಪೂಜಾರಿ ಸಿದ್ದಪ್ಪನವರಿಗೆ ಸೇರಿದ ಜಾಗವೆಂದು ಅದರಲ್ಲಿ ತಿಳಿಸಲಾಗಿದೆ. ಆದರೆ, ಇದ್ದಕ್ಕಿದ್ದಂತೆ 1987ರಲ್ಲಿ ಖಬರಸ್ಥಾನಕ್ಕೆ ಸೇರಿರುವ ಜಾಗವೆಂದು ಅಂದಿನ ಕಂದಾಯ ಅಧಿಕಾರಿಗಳು ದಾಖಲೆ ಸೃಷ್ಠಿಸಿದ್ದಾರೆ. 2014-2015ರ ಪಹಣಿಯಲ್ಲಿ ಈ ಜಾಗವನ್ನು ವಕ್ಫ್ ಸಂಸ್ಥೆಗೆ ಸೇರಿದೆ ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ ಎಂದರು.
ಈ ವೇಳೆ ಬಿ.ಎಂ. ಸತೀಶ್ ಕೊಳೇನಹಳ್ಳಿ, ಕಲ್ಲಪ್ಪ, ಕೊಟ್ರೇಶ್ ಗೌಡ, ಹೆಚ್.ಪಿ. ವಿಶ್ವಾಸ್, ಸಿ. ಶ್ರೀನಿವಾಸ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.