ದಾವಣಗೆರೆ, ನ.15- ಕಾಂಗ್ರೆಸ್ ಪಕ್ಷದ ಆಡಳಿತ ಹೊಂದಿರುವ ದಾವಣಗೆರೆ ಮಹಾನಗರ ಪಾಲಿಕೆಯ ಎಲ್ಲಾ ನಾಲ್ಕೂ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳನ್ನಾಗಿ ಮಹಿಳಾ ಸದಸ್ಯರನ್ನು ನೇಮಕ ಮಾಡುವುದರ ಮೂಲಕ ಆ ಪಕ್ಷದ ವರಿಷ್ಠರು ನಾರಿಯರನ್ನು ಮುಂಚೂಣಿಗೆ ತಂದಿದ್ದಾರೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರುಗಳ ಶಿಫಾರಸ್ಸಿನ ಮೇರೆಗೆ ಪಾಲಿಕೆ ಮಹಾಪೌರರಾದ ಕೆ. ಚಮನ್ ಸಾಬ್ ಅವರ ನೇತೃತ್ವದಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯರು ಎಲ್ಲಾ ನಾಲ್ಕೂ ಸ್ಥಾಯಿ ಸಮಿತಿಗಳಿಗೆ ಮಹಿಳೆಯರನ್ನು ಅಧ್ಯಕ್ಷರುಗಳನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಆಶಾ ಉಮೇಶ್ ಆಯ್ಕೆಯಾಗಿದ್ದಾರೆ.
ಅದೇ ರೀತಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಸುಧಾ ಮಂಜುನಾಥ್ ಇಟ್ಟಿಗುಡಿ ಮತ್ತು ತೆರಿಗೆ ಸುಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಹುರುಬಾನು (ಪಂಡಿತ್) ಅವರುಗಳು ಆಯ್ಕೆಯಾಗಿದ್ದಾರೆ.