ದೇಶದಲ್ಲಿನ ಅನೇಕ ರೈತರು ಸಾವಯವ ಕೃಷಿ ಕಡೆಗೆ ಹೆಚ್ಚು ಒಲವು ತೋರದೇ ಹಣದ ದುರಾಸೆಗೆ ವಿವಿಧ ರೀತಿಯ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣು ಮತ್ತು ನೀರು ಕಲುಷಿತವಾಗಿದ್ದು, ಇದರಿಂದ ಮನುಷ್ಯನ ಆಯಸ್ಸು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದಕ್ಕೆ ಕಾರಣವಾಗಿದೆ.
-ಶ್ರೀ ವಚನಾನಂದ ಮಹಾಸ್ವಾಮೀಜಿ, ಪೀಠಾಧ್ಯಕ್ಷರು, ಪಂಚಮಸಾಲಿ ಸಮಾಜ
ಹರಿಹರ, ನ.15- ಮನುಷ್ಯನ ನರನಾಡಿಗಳು ಆಶಕ್ತವಾದರೆ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಹಾಗೆಯೇ ದೇಶದಲ್ಲಿನ ನದಿಗಳು ಕಲುಷಿತವಾದರೆ ದೇಶವು ಬಡತನದಿಂದ ನರಳುವಂತಾಗುತ್ತದೆ. ಆದ್ದರಿಂದ ದೇಶದಲ್ಲಿನ ಜನರ ಜೀವನ ಶ್ರೀಮಂತಿಕೆಯ ಕಡೆಗೆ ಸಾಗಬೇಕಾದರೆ ನದಿ, ಗಾಳಿ, ಮಣ್ಣು, ಆಕಾಶ ಶುದ್ಧವಾಗಿರಬೇಕು ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ನಗದ ತುಂಗಭದ್ರಾ ನದಿಯ ದಂಡೆಯ ತುಂಗಾರತಿ ಕಾರಿಡಾರ್ ಸ್ಥಳದ ಆವರಣದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ಪರ್ಯಾವರಣ ಟ್ರಸ್ಟ್, ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನ ಕರ್ನಾಟಕ ವತಿಯಿಂದ ಜಲ ಜಾಗೃತಿ, ಜನಜಾಗೃತಿ ಪಾದಯಾತ್ರೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ನದಿಯಲ್ಲಿ ತ್ಯಾಜ್ಯ ಹರಿದು ಬರುವುದರಿಂದ ಹರಿಯುವ ನೀರು ಬಹಳಷ್ಟು ಕಲುಷಿತ ವಾಗುತ್ತಿದ್ದು, ಇದರಿಂದಾಗಿ ಪ್ರಾಣಿ, ಪಕ್ಷಿಗಳೂ ಸಹ ಸಂಕಷ್ಟಕ್ಕೆ ಸಿಲುಕಿ ನಾಶವಾಗುವಂತಹ ವಾತಾವರಣ ಸೃಷ್ಟಿಯಾಗುತ್ತಿದ್ದು, ಅದನ್ನು ತಡೆಯಲು ನದಿಯಲ್ಲಿ ಹರಿಯುವ ನೀರನ್ನು ಶುದ್ಧೀಕರಣ ಮಾಡಿದರೆ ಮುಂದಿನ ಜನತೆಯ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಬೆಳಗ್ಗೆ ಟಿ.ವಿ. ಮಾಧ್ಯಮದಲ್ಲಿ ಬರುವಂತಹ ಕೆಲವು ಜೋತಿಷ್ಯರು ನದಿಯಲ್ಲಿ ಹಳೆಯ ಬಟ್ಟೆಗಳನ್ನು ಬಿಟ್ಟರೆ ಪಾಪಗಳು ಪರಿಹಾರವಾಗಿ, ಉದ್ದಾರ ಆಗುತ್ತೀರಿ ಎಂದು ಹೇಳುತ್ತಿರುವುದರಿಂದ ನದಿ ದಂಡೆಯ ಮೇಲೆ ಟನ್ ಗಳಷ್ಟು ಹಳೆಯ ಬಟ್ಟೆಗಳನ್ನು ಕಾಣಬಹುದಾಗಿದೆ. ಅದೇ ರೀತಿ ತಾಲ್ಲೂಕಿನ ಪ್ರಸಿದ್ಧ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆ ದಿನದಂದು ಹಳೆ ಬಟ್ಟೆಗಳನ್ನು ಸ್ವಚ್ಛತೆಗೆ 2 ಜೆಸಿಬಿ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ.
ಮನುಷ್ಯನು ನದಿಯಲ್ಲಿ ಜಳಕ ಮಾಡಿ ಮನಸ್ಸಿನಲ್ಲಿರುವ ಕೆಟ್ಟ ಗುಣಗಳನ್ನು ತೊಲಗಿಸಲು ಮುಂದಾದರೆ ಬದುಕಿನಲ್ಲಿ ಬದಲಾವಣೆ ಆಗುತ್ತದೆ. ಜೊತೆಗೆ ಪವಿತ್ರ ದಾರಿಯಲ್ಲಿ ಸಾಗಬಹುದು. ಅದನ್ನು ಬಿಟ್ಟು ಹಳೆಯ ಬಟ್ಟೆಗಳನ್ನು ಬಿಡುವುದರಿಂದ ಪಾಪ ಕಡಿಮೆ ಆಗುವುದಿಲ್ಲ ಎಂದು ಹೇಳಿದರು.
ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖ ಐ.ಐ.ಟಿ. ಪ್ರಾಧ್ಯಾಪಕ ಎಲ್.ಕೆ. ಶ್ರೀಪತಿ ಪ್ರಾಸ್ತಾವಿಕ ಮಾತನಾಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕೊಳಚೆ ನೀರು ಜೊತೆಗೆ ಜಮೀನಿಗೆ ಬಳಸುವ ರಾಸಾಯನಿಕ ಗೊಬ್ಬರ ಬಳಕೆ ಮಾಡಿದಾಗ ಮಳೆಯಿಂದಾಗಿ ಮತ್ತು ಪೂಜೆ ಹೆಸರಿನಲ್ಲಿ ಉಪಯೋಗಿಸುವ ವಸ್ತುಗಳಿಂದ ನದಿಯ ನೀರು ಕಲುಷಿತವಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಕಾಣುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಮಹಿಮಾ ಪಟೇಲ್, ಬಸವರಾಜ್ ಪಾಟೀಲ್ ವೀರಾಪುರ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಸೂರ್ಯೋದಯ ಮಠದ ಶ್ರೀ ಶಿವಕುಮಾರ ಸ್ವಾಮಿ, ರಾಷ್ಟ್ರೀಯ ಸ್ವಾಭಿ ಮಾನಿ ಆಂದೋಲನದ ಸಂಚಾಲಕ ಬಸವರಾಜ್ ಪಾಟೀಲ್, ಬಿ.ಎಂ. ಕುಮಾರ ಸ್ವಾಮಿ ಶಿವಮೊಗ್ಗ, ಮಾಜಿ ಶಾಸಕ ಮಹಿಮಾ ಪಟೇಲ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿಪಂ. ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ಮಾಧವನ್ ಜಿ. ಗಿರೀಶ್ ಪಾಟೀಲ್, ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂಭವಿ ನಾಗರಾಜ್, ನಿರ್ಮಲ ತುಂಗಭದ್ರಾ ಅಭಿಯಾನದ ತಾಲ್ಲೂಕು ಸಂಚಾಲಕ ವೀರೇಶ್ ಅಜ್ಜಣ್ಣನವರ್, ಸಂಯೋಜಕಿ ಕೆ.ಸಿ. ಶಾಂತಕುಮಾರಿ, ವಿವೇಕ್ ತ್ಯಾಗಿ, ಸುರೇಂದ್ರ ಸಿಂಗ್ ಭೀಷ್ಮ್, ಮಾಧವನ್ ಜೀ, ಕರಿಬಸಪ್ಪ ಕಂಚಿಕೇರಿ, ಸಿಂಗಾಡಿ ಹನುಮಂತ್, ಉಪನ್ಯಾಸಕ ಗುರುಬಸವರಾಜ್ ವಾಸಪ್ಪ ಮತ್ತು ಇತರರು ಉಪಸ್ಥಿತರಿದ್ದರು.
ಅರ್ಪಿತ ಪ್ರಾರ್ಥಿಸಿದರು. ವೀರೇಶ್ ಅಜ್ಜಣ್ಣನವರ್ ಸ್ವಾಗತಿಸಿದರು. ಗುರುಬಸವರಾಜ್ ನಿರೂಪಿಸಿದರು. ಕಂಚಿಕೇರಿ ಕರಿಬಸಪ್ಪ ವಂದಿಸಿದರು.