ಸಾಮಾಜಿಕ ಸಾಧನೆಗೆ ಸಾಧಕರ ಪರಿಚಯವು ಪ್ರೇರಕ

ಸಾಮಾಜಿಕ ಸಾಧನೆಗೆ ಸಾಧಕರ ಪರಿಚಯವು ಪ್ರೇರಕ

ಶ್ರೀ ಜಯವಿಭವ ವಿದ್ಯಾಸಂಸ್ಥೆ ಸಂಸ್ಥಾಪಕರ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ

ದಾವಣಗೆರೆ, ನ. 14 – ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದರೆ ಅವರ ಸಾಮಾಜಿಕ ಸಾಧನೆಯು ರಾಷ್ಟ್ರದ ಭವಿಷ್ಯವನ್ನು ರೂಪಿಸಬಲ್ಲದು, ಇದಕ್ಕಾಗಿ ಸಾಧಕರ ಪರಿಚಯ ವಿದ್ಯಾರ್ಥಿಗಳಿಗೆ ಅವಶ್ಯ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಹೇಳಿದರು. 

ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಸಂಸ್ಥಾಪಕರ 108ನೇ ಜನ್ಮ ದಿನ, ಮಕ್ಕಳ ದಿನಾಚರಣೆ ಹಾಗೂ ಸಂಸ್ಥೆಯ ಜಾಲತಾಣ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವ ಆಧುನಿಕ ಸಾಧನ ಸವಲತ್ತುಗಳೂ ಇಲ್ಲದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಬಡ ಮತ್ತು ಮಧ್ಯಮ ವರ್ಗದಿಂದ ಬಂದವರು ಹೆಚ್ಚಿನ ಶಾಲಾ ಶಿಕ್ಷಣವಿಲ್ಲದಿದ್ದರೂ ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಅನೇಕರಿಗೆ ಬದುಕು ಕಟ್ಟಿಕೊಡುವಂತಹ ಕೈಗಾರಿಕೋದ್ಯಮಗಳನ್ನು ಸ್ಥಾಪಿಸಿದ್ದು ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು, ಇಂತಹ ಮಹನೀಯರ ಸ್ಮರಣೆ ಇದಕ್ಕೆ ಪೂರಕ ಎಂದರಲ್ಲದೆ ಕೀರ್ತಿ ಶೇಷ ವೀರಭದ್ರಪ್ಪ ಎಂ. ಚಿಗಟೇರಿ ಅವರ ಸಾಮಾಜಿಕ ಸೇವಾ ಸಾಧನೆ ಹಾಗೂ ಬದುಕಿನ ಮೌಲ್ಯಗಳ ಕುರಿತಾದ ಮಹತ್ತರ ಘಟ್ಟಗಳನ್ನು ಹಾಗೂ ಇದಕ್ಕೆ ಸಮಾನಾಂತರವಾಗಿ ಪಂಡಿತ ಜವಾಹರಲಾಲ್ ನೆಹರೂರವರ ಬದುಕಿನ ಪ್ರಮುಖ ಘಟ್ಟಗಳನ್ನು ತುಲನಾತ್ಮಕವಾಗಿ ವಿವರಿಸಿದರು. 

ಮತ್ತೋರ್ವ ಮುಖ್ಯ ಅತಿಥಿಗಳಾಗಿ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪದ್ಮಾ ಪ್ರಕಾಶ್ ಮಾತನಾಡಿ, ಮಕ್ಕಳ ಭವಿಷ್ಯ ಮೊಬೈಲ್‌ಗೆ ಆಹುತಿಯಾಗದಿರಲಿ, ಮೊಬೈಲ್ ಬಳಕೆಯಲ್ಲಿ ಮಿತಿ ಇರಲಿ, `ನಾಳೆ ನಿಮ್ಮದು’ ಎಂಬ ನೆಹರುವರ ವಾಣಿಯನ್ನು ಮಕ್ಕಳು ಸತ್ಯ ಮಾಡಿ ತೋರಿಸಬೇಕು ಎಂದು ಹೇಳಿದರು.                     

ಜಯವಿಭವ ವಿದ್ಯಾ ಸಂಸ್ಥೆಯ ಜಾಲತಾಣವನ್ನು ಬಿಡುಗಡೆ ಮಾಡಿ, ಸಂಸ್ಥೆಯ ಗೌರವ ಅಧ್ಯಕ್ಷ ವೀರಣ್ಣ ಚಿಗಟೇರಿ ಮಾತನಾಡಿದರು. ಉಪಸ್ಥಿತರಿದ್ದು ಮಾತನಾಡಿದ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಜೀವಿತ ವಿ. ಗೆಲುವಿಗೆ ಬೀಗದೆ, ಸೋಲಿಗೆ ಅಂಜದೆ ಮುನ್ನಡೆದರೆ ಮಾತ್ರ ಸಾಧನೆ ಸಾಧ್ಯ ಎಂದರು. 

ಪುಟ್ಟ ವಿದ್ಯಾರ್ಥಿಗಳಾದ ನೂತನ್, ದೈವಿಕ್ ಹಾಗೂ ಜುಮೇರಾ ಮಕ್ಕಳ ದಿನಾಚರಣೆಯ ಬಗ್ಗೆ ಮಾತನಾಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಮುರುಗೇಂದ್ರ ವಿ. ಚಿಗಟೇರಿ ಅವರು ಅಧ್ಯಕ್ಷಿಯ ನುಡಿಗಳನ್ನಾಡಿದರು. 

ಸೌಮ್ಯ ಬಸವರಾಜ್, ಸುಮಂಗಲಮ್ಮ, ಸುವರ್ಣಮ್ಮ, ಮುರುಘರಾಜೇಂದ್ರ ಚಿಗಟೇರಿ, ಜಯದೇವ ಚಿಗಟೇರಿ, ಬಿ.ಎಸ್. ಹಿರೇಮಠ, ಚರಲಿಂಗಯ್ಯ, ಮುರುಗೇಂದ್ರ, ವಾಗ್ದೇವಿ, ಎಂ.ಟಿ. ಮಳಗಿ, ಜಯ ರುದ್ರೇಶ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಮಂಜುಳಾ ಬಿ. ಸಂಗಮೇಶ್, ಹೆಚ್‌. ನಿಂಗಪ್ಪ, ಸುರೇಶನಾಯ್ಕ್‌, ನಾಗರಾಜ್‌ ಎಸ್‌. ಶ್ರೀಮತಿ ವೀರಮ್ಮ ಎಂ.ಎಸ್‌., ಶ್ರೀಮತಿ ಶೈಲಜಾ  ಮತ್ತಿತರರು ಉಪಸ್ಥಿತರಿದ್ದರು. 

ಪ್ರಾಸ್ತಾವಿಕ ನುಡಿಗಳನ್ನು ಸಂಸ್ಥೆಯ ಮನೋಹರ ಚಿಗಟೇರಿ ಪ್ರಸ್ತುತ ಪಡಿಸಿದರೆ, ಶಾಂತಯ್ಯ ಪರಡಿಮಠ ಕಾರ್ಯಕ್ರಮ ನಿರೂಪಿಸಿದರು. 

ನಿರ್ಮಲ ಹಾಗೂ ಪುಷ್ಪ ಪ್ರಾರ್ಥನಾ ಗೀತೆ ಹಾಡಿದರೆ ಬಿ.ಕೆ. ಹನುಮಂತಪ್ಪ ಸ್ವಾಗತ ಕೋರಿದರು. ಸುರೇಶ್ ವಂದನೆಗಳನ್ನು ಸಮರ್ಪಿಸಿದರು. 

ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಪ್ರಸ್ತುತಿ ಗಳು ನೆರವೇರಿದವು. ಅಕ್ಕಮಹಾದೇವಿ ಬಾಲಿಕಾ ಪ್ರೌಢ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.

error: Content is protected !!