ಮಲೇಬೆನ್ನೂರು, ನ.14- ಪಟ್ಟಣದ ಮಧ್ಯಭಾಗದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳಿಗೆ ಇಲ್ಲಿನ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಬುಧವಾರ ಸ್ವಯಂ ಪ್ರೇರಣೆಯಿಂದ ಗ್ರಾವೆಲ್ ತುಂಬಿಸುವುದನ್ನು ರಸ್ತೆ ಅಕ್ಕಪಕ್ಕದ ಜನರು, ಅಂಗಡಿ ಮಾಲೀಕರು ವಿರೋಧಿಸಿ ವಾಗ್ವಾದ ನಡೆಸಿದರು
ಗುಂಡಿ ಮುಚ್ಚುವ ಕೆಲಸ ಆರಂಭವಾಗುತ್ತಿದ್ದಂತೆ ನಾಸೀರ್ ಸಾಬ್, ಯೂಸೂಫ್ ಅಲಿ ಮತ್ತಿತರರು ರಸ್ತೆ ಗುಂಡಿಗಳಿಗೆ ಈ ಗ್ರಾವೆಲ್ ಹಾಕುವುದರಿಂದ ಕೆಂಧೂಳು ಹರಡುತ್ತದೆ. ವಾತಾವರಣ ದೂಳುಮಯವಾಗುತ್ತದೆ ಎಂದು ಆಕ್ಷೇಪಿಸಿದರು.
ನಾಗರಾಜ್ ಪಾಳೇಗಾರ್ ಅವರು ವೆಟ್ ಮಿಕ್ಸ್ ಹಾಕಿದರೆ ಅನುಕೂಲ ಎಂದರು.
ಲಯನ್ಸ್ ಮಾಜಿ ಗೌರ್ನರ್ ಡಾ. ಟಿ.ಬಸವರಾಜ್, ಲಯನ್ಸ್ ವಲಯಾಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಓ.ಜಿ.ರುದ್ರುಗೌಡ್ರು, ಸಿರಿಗೆರೆ ಸಿದ್ದಣ್ಣ, ಎನ್.ಶಿವನಗೌಡ್ರು, ಎನ್.ಜಿ.ಶಿವಾಜಿ ಪಾಟೀಲ್, ಇ.ಎಂ.ಮರುಳಸಿದ್ದಪ್ಪ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷೆ ಪಾರ್ವತಮ್ಮ ಅವರು, ರಸ್ತೆ ಗುಂಡಿ ಮುಚ್ಚಲು ಏಕೆ ಅಡ್ಡಿ ಮಾಡುತ್ತಿದ್ದೀರಿ ? ಜನ, ಜಾನುವಾರು, ಬೈಕ್ ಸವಾರರು ಬಿದ್ದು, ಕೈ-ಕಾಲು ಮುರಿದುಕೊಂಡಿದ್ದಾರೆ. ವಾಹನ ಚಾಲನೆಗೆ ಬಹಳ ತೊಂದರೆ ಆಗುತ್ತಿದೆ ಎಂದು ಉತ್ತರಿಸಿದಾಗ ಸಾರ್ವಜನಿಕರು ಬೆಂಬಲಿಸಿದರು. ನಂತರ ವಾಗ್ವಾದದ ನಡುವೆ ಗುಂಡಿ ಮುಚ್ಚಿಸಿದರು.
ರಸ್ತೆ ಧೂಳಿನಿಂದ ಕೆಮ್ಮು, ದಮ್ಮು ಹೆಚ್ಚಾಗುತ್ತಿದೆ ಎಂದ ಡಾ.ಬಸವರಾಜ್, ಡಾ. ಹೆಚ್.ಜೆ.ಚಂದ್ರಕಾಂತ್ ಅವರು, ಪ್ರತಿನಿತ್ಯ ರಸ್ತೆಗೆ ನೀರು ಹಾಕಿಸಿ ಎಂದು ಪುರಸಭೆ ಸದಸ್ಯರಿಗೆ ಹೇಳಿದರು. ಲಯನ್ಸ್ ಸದಸ್ಯರು, ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಗುಂಡಿ ಮುಚ್ಚುವ ಕೆಲಸ ಮುಂದುವರೆದಿದೆ.
ಪುರಸಭೆ ಸದಸ್ಯ ಷಾ ಅಬ್ರಾರ್, ಚಮನ್ ಷಾ ಆಗಮಿಸಿ, ಮಣ್ಣು ತುಂಬುವವರೊಟ್ಟಿಗೆ ಸಮಾಲೋಚಿಸಿ, ಗುಂಡಿಗಳಿಂದ ಸಾಕಾಗಿದೆ. ಪುರಸಭೆ, ಲೋಕೋಪಯೋಗಿ ಇಲಾಖೆ ಪ್ರತಿನಿತ್ಯ ಎರಡು ಬಾರಿ ನೀರು ಹಾಕಿಸಿದರೆ ತಾತ್ಕಾಲಿಕ ಪರಿಹಾರ ಸಿಗುತ್ತದೆ ಎಂದರು. ಓ.ಜಿ.ಕಿರಣ್, ಉಡೇದರ ಸಿದ್ದಣ್ಣ ಮತ್ತಿತರರು ಈ ವೇಳೆ ಇದ್ದರು.