ತಮ್ಮ ಮಾನ ರಕ್ಷಣೆಗೆ ಪ್ರಾಣಿ ಗಳ ಚರ್ಮ, ಗಿಡದ ತೊಪ್ಪಲು ಆಶ್ರಯಿಸಿದ್ದ ದೇವ, ಮಾನವರ ಮಾನ ರಕ್ಷಣೆಗೆ ವಸ್ತ್ರ ಹಾಗೂ ಜ್ಞಾನ ದೀಕ್ಷೆಗೆ ಇರದ ಸೂತ್ರ ಒದಗಿಸಲು ಸಕಲರ ಅನನ್ಯ ಪ್ರಾರ್ಥನೆಗೆ ಶಿವನ ಚಿಚ್ಚಕ್ತಿಯಿಂದ ಕಾರ್ತಿಕ ಮಾಸ ಶುದ್ದ ದ್ವಾದಶಿಯಂದು ಪರಶಿವನ ಹಣೆಗಣ್ಣಿನಿಂದ ಅವತರಿಸಿ ತ್ರೈಲೋಕ್ಯದವರ ಮಾನರಕ್ಷಣೆಗೆ ವಸ್ತ್ರ, ಜ್ಞಾನ ದೀಕ್ಷೆಗೆ ಸೂತ್ರ ದೊರಕಿಸಿದವರು ದೇವಲ ಮಹರ್ಷಿಗಳು. ಇವರು ದೇವರ ಅಂಗ ಎಂದು ಕರೆಸಿಕೊಳ್ಳುವ ದೇವಾಂಗ ಜನರ ಮೂಲ ವಂಶಜರು.
ವ್ಯಾಸ ರಚಿತ ಬ್ರಹ್ಮಾಂಡ ದೇವಾಂಗ ಪುರಾಣದಂತೆ ಇವರು ಪ್ರಾಕೃತ ಅಂದರೆ ಹುಟ್ಟಿನಿಂದಲೇ ಬ್ರಾಹ್ಮಣರು. ಶ್ರೀ ರಾಮಲಿಂಗ, ಶ್ರೀ ಚೌಡೇಶ್ವರಿ ದೇವಿ ಇವರ ಆರಾಧ್ಯ ದೇವರು. ಬಹುತೇಕರು ರೇಷ್ಮೆ ಹಾಗೂ ಹತ್ತಿ ಬಟ್ಟೆ ನೇಕಾರರು. ವಿಜಯನಗರದ ಉಜ್ಜಯಿನಿ ಸಾಮ್ರಾಜ್ಯದಲ್ಲಿ ಅನೇಕರು ಯೋಧರೂ ಸಹ ಆಗಿದ್ದರು ಎಂದು ಹೇಳಲಾಗುತ್ತಿದೆ. ಶ್ರೀ ಗಾಯತ್ರಿ ಮಂತ್ರ ಮೂಲ ಮಂತ್ರವಾಗಿದ್ದು, ಜನಿವಾರ, ವಿಭೂತಿ, ಕುಂಕುಮ, ಗಂಧ ಧಾರಕರು.
ದೇವಲ ಮಹರ್ಷಿಗಳು ತದನಂತರ ದಲ್ಲಿ ಚಿತ್ರಯೋಗಿ, ವಿಧ್ಯಾದರ, ವರ ರುಚಿ, ಪುಷ್ಪದಂತ, ಬೇತಾಳ, ದೇವಶಾಲಿ ಗಳಾಗಿ ಅವತರಿಸಿ ಕೊನೆಯದಾಗಿ ವಿಶ್ವಕ್ಕೆ ಸಂಸ್ಕೃತಿ, ಧರ್ಮಾಚರಣೆಯ ವಿಧಾನಗಳ ವಚನಗಳನ್ನು ರಚಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯರಾಗಿ ಈಗಿನ ಯಾದಗಿರಿ ಜಿಲ್ಲೆಯ ಮುದನೂರಿ ನಲ್ಲಿ ಜನಿಸುತ್ತಾರೆ. ದಾಸಿಮಯ್ಯರಂತೆ ಶ್ರೀ ದೇವಲ ಮಹರ್ಷಿಗಳನ್ನು ಗುರುತಿಸುವ ಕಾರ್ಯ ಇನ್ನು ಹೆಚ್ವು ಹೆಚ್ಚು ನಡೆಯಬೇಕಿದೆ ಎನ್ನುವ ಆಶಯ ಗದಗ-ಹೊಸಳ್ಳಿಯ ಬೂದೀಶ್ವರ ಶ್ರೀಗಳ ಹಾಗೂ ಸಕಲ ದೇವಾಂಗದವರದ್ದಾಗಿದೆ.
ಕರ್ನಾಟಕ, ಪಾಂಡಿಚೇರಿ, ಓರಿಸಾ, ತಮಿಳನಾಡು, ಆಂಧ್ರಪ್ರದೇಶ, ಆಸ್ಸಾಂ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊಯಮತ್ತೂರಿನಂತಹ ನಗರಗಳಲ್ಲಿ ಈ ಸಮೂದಾಯದ ಜನರು ವಿವಿಧ ಹೆಸರುಗಳಿಂದ ಗುರುತಿಸಲ್ಪಡುತ್ತಿದ್ದು, ಬಹಳಷ್ಟು ಜನ ನೇಕಾರಿಕೆ ಉದ್ಯೋಗ ಆಶ್ರಯಿಸಿದವರು.
-ಮನೋಹರ ಮಲ್ಲಾಡದ, ರಾಣೇಬೆನ್ನೂರು.