ದಾವಣಗೆರೆ, ನ.12- ನಿನ್ನೆ ರಾತ್ರಿ 11 ರ ಸುಮಾರಿಗೆ ನಗರದ ಟ್ಯಾಂಕ್ ಬಂಡ್ ರಸ್ತೆ ಅಂದರೆ ಹನುಮಂತಪ್ಪನವರ ಛತ್ರದಿಂದ ಜಯದೇವ ಸರ್ಕಲ್ ಕಡೆಗೆ ಹೋಗುವ ರಸ್ತೆಯಲ್ಲಿ ಜೆಸಿಬಿಯೊಂದು ತುಳಸಿ ಹಬ್ಬಕ್ಕಾಗಿ ಮಾರಾಟ ಮಾಡಲು ರಸ್ತೆಯಲ್ಲಿ ತಂದಿಟ್ಟಿದ್ದ ಬಾಳೆಕಂದುಗಳು, ಮಾವಿನ ಸೊಪ್ಪು, ನಲ್ಲಿ ಟೊಂಗೆ ಮುಂತಾದವನ್ನು ಎತ್ತಿ ಆಚೆ ಹಾಕಲು ಸಜ್ಜಾಗಿದ್ದರೆ. ಅವುಗಳನ್ನು ತಂದವರು `ಇಲ್ಲೇ ಮಾರಾಟ ಮಾಡಲು ದಯಮಾಡಿ ಅವಕಾಶ ಕೊಡಿ’ ಎಂದು ದೈನ್ಯವಾಗಿ ಬೇಡಿಕೊಳ್ಳುತ್ತಿದ್ದರು. ಅವರೆಲ್ಲಾ ಬಹುತೇಕ ಹಳ್ಳಿಗಳಿಂದ ಬಂದ ಬಡ ಕೃಷಿ ಕೂಲಿ ಕಾರ್ಮಿಕರೇ ಆಗಿದ್ದರು. ಕೆಲ ಹೆಂಗಸರಂತೂ ಕಣ್ಣೀರಿಡುತ್ತಾ ಕೈಮುಗಿದು ಅಂಗಲಾಚುತ್ತಿದ್ದರು.
ನಗರ ಪಾಲಿಕೆಯ ಆರೋಗ್ಯ ವಿಭಾಗದ ಒಂದಿಬ್ಬರು ಹಾಗೂ ಓರ್ವ ಪೊಲೀಸ್, `ಮೇಲಾಧಿಕಾರಿಗಳ ಆದೇಶ ವಾಗಿದೆ. ಸ್ಥಳೀಯ ಅಂಗಡಿಗಳವರ ವ್ಯಾಪಾರಕ್ಕೆ ತೊಂದರೆ ಯಾಗುತ್ತದೆ ಎಂದು ದೂರು ಬಂದಿದೆಯಂತೆ, ಹೈಸ್ಕೂಲ್ ಮೈದಾನಕ್ಕೆ ತೆಗೆದುಕೊಂಡು ಹೋಗಿರಿ ಎಂದು ಹೇಳುತ್ತಿ ದ್ದರು. `ಇಲ್ಲಿ ರಸ್ತೆಯಲ್ಲಿ ಮಾರುವಂತಿಲ್ಲ ಅನೌನ್ಸ್ ಮಾಡಿ ದ್ದೇವೆ’ ಎಂದು ಪಾಲಿಕೆಯವರು ಹೇಳುತ್ತಿದ್ದರಾದರೂ `ನಾವು ಈಗಷ್ಟೇ ಬಂದಿದ್ದೇವೆ ಸ್ವಾಮಿ, ನಮಗೊಂದೂ ಗೊತ್ತಿಲ್ಲ’ ಎನ್ನುತ್ತಿದ್ದರು ತೋರಣ ಸೊಪ್ಪು ತಂದವರು.
ಇಂದು ಬೆಳಗಿನ ಜಾವ ಹೈಸ್ಕೂಲ್ ಮೈದಾನದ ಬಳಿ ಹೋಗಿ ನೋಡಿದೆ. ಕೆಲವರು ನಡುರಾತ್ರಿಗಯೇ ಅಲ್ಲಿಗೆ ಸ್ಥಳಾಂತರಿಸಿದರೆ, ಇನ್ನು ಕೆಲವರು ತುಂಬಾ ಕಷ್ಟದಿಂದ ಸ್ಥಳಾಂತರ ಮಾಡುತ್ತಿದ್ದರು. ಯಾರೋ ಓರ್ವ ವ್ಯಕ್ತಿ ತನ್ನ ಬೈಕ್ನಲ್ಲಿ ಸ್ಥಳಾಂತರಿಸಲು ಓರ್ವ ಮಹಿಳೆಗೆ ಸಹಕರಿಸುತ್ತಿದ್ದರೆ ಒಂದಷ್ಟು ನೆಲ್ಲಿ ಟೊಂಗೆಗಳು ರಸ್ತೆಯಲ್ಲಿ ಬಿದ್ದು, ನೆಲ್ಲಿಕಾಯಿಗಳೆಲ್ಲಾ ಉದುರಿ ಹೋಗಿ ಆ ಮಹಿಳೆ ಗೋಳಿಡುತ್ತಿದ್ದಳು. ಹೊಸದುರ್ಗದಿಂದ ಬಂದಿದ್ದ ಓರ್ವ ವ್ಯಕ್ತಿ `5,000 ರೂ. ಗಾಡಿ ಬಾಡಿಗೆ ಕೊಟ್ಟು ತಂದಿದ್ದೇನೆ, ಇಲ್ಲಿ ಆಚೀಚೆ ಮಾಡುವುದರಲ್ಲೇ ಎಲ್ಲಾ ಹಾಳಾಗುತ್ತಿವೆ’ ಎಂದು ಅಲವತ್ತುಕೊಂಡ.
ನಾಗಮ್ಮ ಎಂಬ ಮಹಿಳೆ `ಉಚ್ಚಂಗಿದುರ್ಗದಿಂದ ಬಂದಿದ್ದೇನೆ ಸ್ವಾಮಿ, ಈ ಮೈದಾನದಲ್ಲಿ ಸೊಪ್ಪು ಇಟ್ಕೊಂಡು ಮಲಗೋಣವೆಂದರೂ ಕಲ್ಲುಗಳು ಚುಚ್ಚಿದವು, ದೊಡ್ಡ ಸೊಳ್ಳೆಗಳು ಕಚ್ಚಿದವು, ನಮ್ಮ ಪಡಿಪಾಟಲ ಯಾರಿಗೆ ಹೇಳುವುದು’ ಎಂದು ಕಣ್ಣೀರಿಟ್ಟಳು. `ಅಲ್ಲಿ ರಸ್ತೆಯಲ್ಲಾಗಿದ್ದರೆ ಮಳೆ ಬಂದರೆ ಹೋಗಿ ನಿಲ್ಲಲು ಅಂಗಡಿ ಮುಂಗಟ್ಟುಗಳ ಕಟ್ಟೆಗಳಾದರೂ ಇರುತ್ತಿದ್ದವು, ಈ ಮೈದಾನದಲ್ಲಿ ಎಲ್ಲಿಗೆ ಹೋಗುವುದು, ಬಯಲಾದ್ದರಿಂದ ಇಲ್ಲಿ ಚಳಿಗಾಳಿ ಬೇರೆ, ಇದೇ ಕೊನೆ, ಇನ್ನು ಸೊಪ್ಪು ತೋರಣ ಮಾರಲು ತರುವುದೇ ಇಲ್ಲ’ ಎಂದು ಆವರಗೊಳ್ಳ – ಕಕ್ಕರಗೊಳ್ಳ ಕಡೆಯಿಂದ ಬಂದ ಹೆಂಗಸರು ಸೆರಗಿಂದ ಕಣ್ಣೊರೆಸಿಕೊಂಡರು.
`ಕುಡಿಯಲು ನೀರು ಇಲ್ಲ ಪ್ರಕೃತಿ ಬಾಧೆ ತೀರಿಸಿಕೊಳ್ಳಲು ಕನಿಷ್ಠ ವ್ಯವಸ್ಥೆಯೂ ಇಲ್ಲ’ ಎಂದಳು ಇನ್ನೋರ್ವ ಮಹಿಳೆ. ವರ್ಷದ ಮೂರ್ನಾಲ್ಕು ದೊಡ್ಡ ಹಬ್ಬಗಳ ಸಾಂಪ್ರದಾಯಿಕ ತಳಿರು ತೋರಣ, ಸೊಪ್ಪು ಕಂದುಗಳನ್ನು ಮಾರಲು ಬರುವ ಈ ಗ್ರಾಮೀಣ ಬಡ ಕೃಷಿ ಕೂಲಿ ಕಾರ್ಮಿಕರ ಸ್ಥಿತಿ ದಯನೀಯ. ಇವರೇನೂ ಇಲ್ಲಿ ಖಾಯಂ ಆಗಿ ವ್ಯಾಪಾರ ಕೂರುವವರಲ್ಲ. ಹಿಂದಿನ ಸಂಜೆ ಬಂದು ಮಾರನೇ ಮಧ್ಯಾಹ್ನ ವಾಪಸ್ ಹೋಗುವವರು. ಸ್ಥಳೀಯ ಅಂಗಡಿ ಮುಂಗಟ್ಟುಗಳವರು ಇವರಿಗೆ ತುಸು ಸಹಕರಿಸಬಹುದಿತ್ತು. ಆ ರಸ್ತೆಯಲ್ಲಿ ಅಂಗಡಿ ಮಾಡಿದ್ದೇವೆಂದರೆ ಅಪರೂಪಕ್ಕೆ ಇದು ಅನಿವಾರ್ಯ ಎಂಬುದನ್ನು ತಿಳಿಯಬಹುದಾಗಿತ್ತು.
`ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ…’ ಎಂಬ ಅಕ್ಕಮಹಾದೇವಿಯವರ ವಚನ ಇಲ್ಲಿ ನೆನಪಾಗುತ್ತದೆ. ಹೈಸ್ಕೂಲು ಮೈದಾನದಲ್ಲೇ ಮಾರಾಟಕ್ಕೆ ಅವಕಾಶ ಎನ್ನುವುದಾದಲ್ಲಿ ತಾತ್ಕಾಲಿಕವಾಗಿಯಾದರೂ ಅವರಿಗೆ ಕುಡಿಯುವ ನೀರು, ಬೆಳಕು ಹಾಗೂ ಹೆಣ್ಣು ಮಕ್ಕಳು ಪ್ರಕೃತಿಬಾಧೆ ತೀರಿಸಿಕೊಳ್ಳಲು ತುಸು ವ್ಯವಸ್ಥೆಯನ್ನಾದರೂ ಮುಂದಿನ ದಿನಗಳಲ್ಲಿ ಮಾಡುವುದು ಒಳಿತು. ಹಾಗೆ ಬರುವ ಆ ಬಡ ಜನರಿಗೆ ಒಂದು ಹೊತ್ತಿನ ಆಹಾರ ವ್ಯವಸ್ಥೆಯನ್ನು ಯಾರಾದರೂ ಸ್ವಯಂ ಸೇವಾಸಂಸ್ಥೆಯವರು ಮಾಡುವಂತಾದಲ್ಲಿ ಅದು ಮಹೋಪಕಾರವಾಗುತ್ತದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ಆಶಯ ವ್ಯಕ್ತಪಡಿಸಿದ್ದಾರೆ.