ಜಿಎಂಐಟಿ ಐಎಸ್ ಸಿ ವಿಭಾಗದ ಅಟಲ್ ಪ್ರಾಯೋಚಿತ ಎಫ್ ಡಿಪಿ ಕಾರ್ಯಕ್ರಮದಲ್ಲಿ ಡಾ. ಜಿ.ಟಿ. ರಾಜು
ದಾವಣಗೆರೆ, ನ. 11 – ಸ್ವಯಂ ಜಾಗ್ರತರಾಗಿದ್ದರೆ ಆನ್‌ಲೈನ್ ಮುಖಾಂತರ ವಂಚಿಸುವ ಯಾವುದೇ ಸೈಬರ್ ಅಪರಾಧಗಳಿಗೆ ಒಳಗಾಗದೇ ನಮ್ಮನ್ನು ನಾವು ಸುರಕ್ಷಿತವಾಗಿಸಿ ಕೊಳ್ಳಬಹುದು ಎಂದು ಬೆಳಗಾವಿ ವಿಟಿಯು ಶೈಕ್ಷಣಿಕ ಸೆನೆಟ್ ಸದಸ್ಯರು, ಚಿಕ್ಕಬಳ್ಳಾಪುರ ಎಸ್ ಜೆ ಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಟಿ. ರಾಜು ತಿಳಿಸಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಇಂದು ಹಮ್ಮಿಕೊಳ್ಳಲಾಗಿರುವ ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಟ್ಸಾಪ್, ಫೇಸ್ಬುಕ್, ಜಿ-ಮೇಲ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳು ಮಾಹಿತಿಗಾಗಿ ಎಷ್ಟು ಅವಶ್ಯಕವೋ, ಎಚ್ಚರಿಕೆ ವಹಿಸದಿದ್ದರೆ ಅಷ್ಟೇ ಅಪಾಯಕಾರಿ ಸಹ ಆಗಿವೆ.
ಪ್ರಸ್ತುತ ತಂತ್ರಜ್ಞಾನ ಬೆಳೆದಂತೆ ಅವಶ್ಯಕತೆಗೆ ಅನಿವಾರ್ಯವಾಗಿರುವ ಕಾರಣ ಶಿಕ್ಷಣ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆನ್ ಲೈನ್ ಮುಖಾಂತರ ವ್ಯವಹಾರ, ಸಂವಹನ ಬಳಕೆ ಕಾಣಲಾಗುತ್ತಿದೆ. ಆನ್ ಲೈನ್ ಮುಖಾಂತರ ವಂಚಿಸುವ ಸೈಬರ್ ಅಪರಾಧಗಳು ಕೇವಲ ತಾಂತ್ರಿಕ ವಿಧಾನವಷ್ಟೇ ಆಗಿರದೇ ಪ್ರಸ್ತುತ ದಿನಮಾನಗಳಲ್ಲಿ ವಂಚಕರು ಸಂಸ್ಕೃತಿಯನ್ನಾಗಿಸಿ ಕೊಂಡಿದ್ದಾರೆ ಎಂದು ಹೇಳಿದರು.
ಹೀಗೆ ಸಾಮಾಜಿಕ ಜಾಲ ತಾಣಗಳನ್ನು ಮತ್ತು ಆನ್ ಲೈನ್ ಬಳಕೆ ಮಾಡಿಕೊಳ್ಳುವಾಗ ಅಲ್ಲಿನ ಯಾವುದೇ ವಿಷಯಗಳ ಬಗ್ಗೆ ಜಾಗರೂಕರಾಗಿರ ಬೇಕು. ಸಂಬಂಧಪಡದ ವಿಷಯಗಳು, ಅಪರಿಚಿತ ವ್ಯಕ್ತಿಗಳ ಬಗ್ಗೆ ಕಿವಿಗೊಡದೆ ಜಾಗ್ರತೆ ವಹಿಸಿದಾಗ ಆನ್ ಲೈನ್ ಮುಖಾಂತರ ವಂಚನೆಯಿಂದ ದೂರ ಉಳಿಯಬಹುದು ಎಂದು ಅಭಿಪ್ರಾಯ ಪಟ್ಟರು.
ಬೆಳಗಾವಿ ವಿಟಿಯು ಪಿಹೆಚ್‌ಡಿ ವಿಭಾಗದ ವಿಶೇಷ ಅಧಿಕಾರಿ ಡಾ. ವಿರೂಪಾಕ್ಷಪ್ಪ ಬೆಟಗೇರಿ ಆನ್‌ಲೈನ್ ವಿಡಿಯೋ ಮುಖೇನ ಈ ಕಾರ್ಯಕ್ರಮದ ಯಶಸ್ವಿಗೆ ಶುಭ ಕೋರುತ್ತಾ, ತಂತ್ರಜ್ಞಾನ ಮುಂದುವರಿದಂತೆ ಅದರ ಬಳಕೆ ಸಹ ಅಷ್ಟೇ ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಮುಖಾಂತರ ಸೈಬರ್ ವಂಚನೆಗಳು ಸಾಕಷ್ಟು ನಡೆಯುತ್ತಿವೆ. ವಂಚನೆಗಳನ್ನು ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಅದಕ್ಕೆ ಪ್ರತ್ಯೇಕವಾದಂತಹ ಸೈಬರ್ ವಿಭಾಗವನ್ನೇ ಸ್ಥಾಪಿಸಲಾಗಿದ್ದು, ವಂಚನೆಗೆ ಒಳಗಾಗುವ ತನಕ ವಂಚಿಸುವುದು ತಪ್ಪೋದಿಲ್ಲ. ಹಾಗಾಗಿ ತಂತ್ರಜ್ಞಾನ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ವೇಳೆ ನಮಗೆ ನಾವೇ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಎಂಐಟಿ ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ, ಪ್ರಸ್ತುತ ತಂತ್ರಜ್ಞಾನ ಬೆಳೆದಂತೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಅಧ್ಯಾಪಕರು ತಿಳುವಳಿಕೆ ಹೊಂದಬೇಕು. ಅದಕ್ಕೆ ಈ ಕಾರ್ಯಕ್ರಮ ಅನುಕೂಲವಾಗಲಿದೆ ಎಂದು ಹೇಳಿದರು.
ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರು, ಜಿಎಂ ಯೂನಿವರ್ಸಿಟಿ ಮತ್ತು ಎಫ್‌ಡಿಪಿ ಸಂಚಾಲಕ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ. ಅವರು ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಡೀನ್ ಡಾ. ಕೆ.ಎನ್. ಭರತ್, ಎಫ್ ಡಿ ಪಿ ಸಂಯೋಜಕರುಗಳಾದ ಪ್ರೊ. ಸೌಮ್ಯ ಎತ್ತಿನಹಳ್ಳಿ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ ಟಿ ಆರ್, ಎಸ್, ಸೌಮ್ಯ ಮತ್ತು ಪ್ರೊ. ಇಮ್ರಾನ್ ಖಾನ್ ಸೇರಿದಂತೆ ಇತರರು ಇದ್ದರು.
ಗಗನ್ ದೀಪ್, ರಕ್ಷಿತಾ ನಿರೂಪಿಸಿದರು. ಐಎಸ್‌ಸಿ ವಿಭಾಗದ ಮುಖ್ಯಸ್ಥರಾದ ಡಾ. ನೀಲಾಂಬಿಕೆ ವಂದಿಸಿದರು.