ಸಮಾಜ ಸಂಘಟನೆಗೆ ಬದುಕನ್ನೇ ಮೀಸಲಿಟ್ಟಿದ್ದ ಹಾನಗಲ್ಲ

ಸಮಾಜ ಸಂಘಟನೆಗೆ ಬದುಕನ್ನೇ ಮೀಸಲಿಟ್ಟಿದ್ದ  ಹಾನಗಲ್ಲ

ಶ್ರೀ ಕುಮಾರ ಶಿವಯೋಗಿಗಳು

ರಾಣೇಬೆನ್ನೂರು,ನ.11- ಸಮಾಜದ ಕಣ್ಣೀರು ಒರೆಸಿ ಸುಂದರ ಹಾಗೂ ಸದೃಢವಾದ ಸಮಾಜ ನಿರ್ಮಿಸಲು  ತಮ್ಮ ಜೀವವನ್ನೇ  ಶ್ರೀಗಂಧದಂತೆ  ತೇಯ್ದು ಸುಗಂಧ ಬೀರಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟಿಸಿದ್ದರು ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಶ್ಲ್ಯಾಘಿಸಿದರು.

ಇಲ್ಲಿನ ಆದಿಶಕ್ತಿ ದೇವಸ್ಥಾನದ ಸಭಾ ಭವನದಲ್ಲಿ ನಡೆದ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಶಿವಯೋಗಿಗಳ 157ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸುಂದರ ಸಮಾಜ ಕಟ್ಟುವ ಧ್ಯೇಯದ ಶಿವಯೋಗಿ ಗಳು ಬಾಗಲಕೋಟೆ ಜಿಲ್ಲೆಯಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಿ, ಸಮಾಜದ ಹಿತಚಿಂತನೆ ಬಯಸುವ ಮಠಾಧೀಶರಿಗೆ ಅಲ್ಲಿ ತರಬೇತಿ ನೀಡುವ  ಮೂಲಕ ಸಮಾಜ ಸಂಘಟನೆಗೆ ತಮ್ಮ ಬದುಕು ಮೀಸಲಿರಿಸಿದ್ದರು ಎಂದು ಓಂಕಾರ ಶ್ರೀಗಳು ನುಡಿದರು.

ಜಂಗಮ ಕ್ಷೇತ್ರ ಲಿಂಗನಾಯ್ಕನಹಳ್ಳಿ ಚನ್ನವೀರ ಸ್ವಾಮೀಜಿ, ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಶ್ರೀ ಗಳು, ಮಹಾಸಭೆ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ರು, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ಕೋರಧಾನ್ಯಮಠ, ಖಜಾಂಚಿ ಮಲ್ಲೇಶಣ್ಣ ಅರಕೇರಿ, ಮಾಜಿ ಅಧ್ಯಕ್ಷ ಕೆ.ಎಂ.ಬಂದಮ್ಮನವರ ಮತ್ತಿತರರಿದ್ದರು.

ಮಹಿಳಾ ಘಟಕದ ಪುಷ್ಪಾ ಬದಾಮಿ, ಸರೋಜ ಹೂಲಿಹಳ್ಳಿ, ವಿನಯ ಪಾಟೀಲ, ಕವಿತಾ ಕೋತಂಬ್ರಿ, ಲೀಲಾ ಪಟ್ಟಣಶೆಟ್ಟಿ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!